
ಉಡುಪಿ: ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತು ಉಲ್ಲಂಘನೆ ಆರೋಪದಲ್ಲಿ ಎಸ್ ಡಿಪಿಐ ಮುಖಂಡ ರಿಯಾಜ್ ಕಡಂಬು ಅವರನ್ನು ಜಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸಂಘಪರಿವಾರದ ವಿರುದ್ಧ ದ್ವೇಷ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಲಾಗಿದ್ದು, ಅವರನ್ನು ಹಿರಿಯಡ್ಕ ಸಬ್ ಜೈಲ್‌ಗೆ ಕಳುಹಿಸಲಾಗಿದೆ.
ಜುಲೈನಲ್ಲಿ ಬ್ರಹ್ಮಾವರ ತಾಲೂಕಿನ ಕುಂಜಾಲು ಬಳಿ ಹಸುವಿನ ತಲೆ ಪತ್ತೆಯಾಗಿತ್ತು. ಇದು ವ್ಯವಸ್ಥಿತ ಷಡ್ಯಂತ್ರ ಎಂದು ರಿಯಾಜ್ ಕಡಂಬು ಹೇಳಿಕೆ ನೀಡಿದ್ದರು. ಜುಲೈ 15 ರಂದು ದ್ವೇಷ ಭಾಷಣ ಆರೋಪದಲ್ಲಿ ರಿಯಾಜ್ ಕಡುಂಬ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದರು.
ಜಾಮೀನು ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಏನಿದು ಪ್ರಕರಣ?
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಲು ರಾಜ್ಯ ಹೆದ್ದಾರಿಯಲ್ಲಿ ಜುಲೈನಲ್ಲಿ ಹಸುವಿನ ತಲೆ ಮತ್ತು ದೇಹದ ಭಾಗಗಳು ಪತ್ತೆಯಾಗಿತ್ತು. ಈ ಬಗ್ಗೆ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬ್ರಹ್ಮಾವರದಲ್ಲಿ ಹಸುವಿನ ದೇಹದ ಭಾಗಗಳನ್ನು ವಿಲೇವಾರಿ ಮಾಡಿರುವ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಉಡುಪಿ ಪಟ್ಟಣ ಪೊಲೀಸರು SDPI ಮುಖಂಡ ರಿಯಾಜ್ ಕಡಂಬು ವಿರುದ್ಧ ಪ್ರಕರಣ ದಾಖಲಿಸಿದ್ದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಿಯಾಜ್ ಕಡಂಬು, ಬ್ರಹ್ಮಾವರದ ಕುಂಜಾಲು ಎಂಬಲ್ಲಿ ಹಸುವಿನ ತಲೆ ಮತ್ತು ಇತರ ದೇಹದ ಭಾಗಗಳನ್ನು ರಸ್ತೆಗೆ ಎಸೆದ ಘಟನೆಯು ಅಭಿವೃದ್ಧಿ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಂಘ ಪರಿವಾರದ ಕಾರ್ಯಕರ್ತರು ನಡೆಸಿದ ಸಂಘಟಿತ ಕೃತ್ಯವಾಗಿದೆ. ಈ ಘಟನೆಯಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಘಟನೆಯ ಹಿಂದಿನ ವ್ಯಕ್ತಿಗಳನ್ನು ಪತ್ತೆಹಚ್ಚುವಂತೆ ಪೊಲೀಸರನ್ನು ಕೇಳಿಕೊಂಡಿದ್ದರು.
Advertisement