
ಬೆಂಗಳೂರು: ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮತಕಳ್ಳತನದ ವಿರುದ್ಧ ಬೃಹತ್ ರ್‍ಯಾಲಿ ನಡೆಸಲು ರಾಜ್ಯ ಕಾಂಗ್ರೆಸ್ ಚಿಂತನೆ ನಡೆಸಿದ್ದು, ರ್ಯಾಲಿಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಆಹ್ವಾನ ನೀಡಿದೆ.
ರ್‍ಯಾಲಿಗೆ ಆಹ್ವಾನಿಸಿ ರಾಹುಲ್ ಗಾಂಧಿ ಅವರಿಗೆ ಆಳಂದ ಶಾಸಕ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಉಪಾಧ್ಯಕ್ಷ ಬಿ.ಆರ್ ಪಾಟೀಲ್ ಪತ್ರ ಬರೆದಿದ್ದಾರೆ.
ಮತಗಳವು ಕುರಿತು ರಾಷ್ಟ್ರದ ಮುಂದೆ ಇರಿಸಲಾದ ಐತಿಹಾಸಿಕ ಪವರ್ ಪಾಯಿಂಟ್ ಪ್ರಸ್ತುತಿಗಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಇದು ಇಡೀ ದೇಶದ ಗಮನ ಸೆಳೆದಿದೆ. ಭಾರತ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಉತ್ತಮ ಚರ್ಚೆಗೆ ನಾಂದಿ ಹಾಡಿದೆ. ನೀವು ಎತ್ತಿದ ತಾರ್ಕಿಕ ಪ್ರಶ್ನೆಗಳಿಗೆ ಉತ್ತರಿಸಲು ಆಯೋಗಕ್ಕೆ ಸಾಧ್ಯವಾಗಿಲ್ಲ. ಅದು ಯಾವುದೇ ಮನವರಿಕೆಯಾಗುವ ಉತ್ತರ ನೀಡಲಾಗದೆ ನೆಲಕಚ್ಚಿದೆ. ಮತಗಳವು ಕುರಿತ ನಿಮ್ಮ ಟೀಕೆಯನ್ನು ಪತ್ರಿಕೆಗಳು ಗಂಭೀರವಾಗಿ ಪರಿಗಣಿಸಿವೆ. ಚುನಾವಣಾ ಆಯೋಗವನ್ನು ಪ್ರಶ್ನಿಸಿವೆ. ಚುನಾವಣಾ ಆಯೋಗವು ಬೆನ್ನುಮೂಳೆಯಿಲ್ಲದ ಸಾಂವಿಧಾನಿಕ ಸಂಸ್ಥೆಯಾಗಿ ಮಾರ್‍ಪಟ್ಟಿದ್ದು, ಕೇಂದ್ರ ಗೃಹ ಸಚಿವರ ಸೇವಕನೆಂತೆ ಕೆಲಸ ಮಾಡುತ್ತಿದೆ.
ಬಿಜೆಪಿಗೆ ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ, ಮತದಾರರ ಪಟ್ಟಿಯಿಂದ ನಿಜವಾದ ಮತದಾರರನ್ನು ತೆಗೆದುಹಾಕುವ ದುಷ್ಕೃತ್ಯಗಳಲ್ಲಿ ತೊಡಗಿದೆ. ಆಳಂದ ಮತಗಳವು ಪ್ರಕರಣ ಸಂಬಂಧ ಕರ್ನಾಟಕದ ಜನರು, ವಿಶೇಷವಾಗಿ ನನ್ನ ಆಳಂದ ಕ್ಷೇತ್ರ ಮತ್ತು ಕಲಬುರಗಿ ಜಿಲ್ಲೆಯ ನಾಗರಿಕರು ಚುನಾವಣಾ ಆಯೋಗ ಮತ್ತು ಬಿಜೆಪಿಯ ಧೋರಣೆಗಳನ್ನು ಬಯಲು ಮಾಡಲು ಬೃಹತ್ ರ್‍ಯಾಲಿ ನಡೆಸಲು ಸಿದ್ದರಾಗಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ನಿಮ್ಮ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಕೂಲಕರ ದಿನಾಂಕವನ್ನು ತಿಳಿಸಿದರೆ, ರ್‍ಯಾಲಿಗೆ ಸಿದ್ದತೆಗಳು ನಡೆಯಲಿವೆ ಎಂದು ಪತ್ರದಲ್ಲಿ ಹೇಳಿದ್ದಾರೆ.
Advertisement