
ರಾಯಚೂರು: ಡಿಸೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು. ರಾಜ್ಯ ಸರ್ಕಾರದಲ್ಲಿ ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ, ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎನ್ನುವ ಕುರಿತಂತೆ ಕೇಳಿ ಬರುತ್ತಿರುವ ಮಾತುಗಳು ಕೇವಲ ಉಹಾಪೋಹ. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಏನು ಮಾತುಕತೆ ನಡೆದಿದೆ ಎನ್ನುವುದರ ಕುರಿತು ಯಾರಿಗೂ ಗೊತ್ತಿಲ್ಲ.
ಊಹಾಪೋಹದ ಆಧಾರದ ಮೇಲೆಯೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನನಗೆ ತಿಳಿದಿರುವ ಹಾಗೆ ಅಧಿಕಾರ ಹಂಚಿಕೆಯ ಚರ್ಚೆಯೇ ಆಗಿಲ್ಲ. ನಮ್ಮ ಪಕ್ಷದಲ್ಲಿ ಸಾಕಷ್ಟು ಹಿರಿಯರು ಸಿಎಂ ಪದವಿಗೆ ಅರ್ಹರಾಗಿದ್ದಾರೆ. ಅದಕ್ಕಾಗಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಅನೇಕ ಹಿರಿಯರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಬೇಡಿಕೆಯಿದೆ. ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತೆಯೇ ಮುಖ್ಯಮಂತ್ರಿಯವರು ಸೂಚ್ಯವಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಮಾಜಿ ಸಂಸದ ಪ್ರತಾಪಸಿಂಹ ಅಪ್ರಸ್ತುತ ರಾಜಕಾರಣಿ. ಅವರ ಪಕ್ಷದವರೇ ಕೇಳುವುದಿಲ್ಲ. ನಾವೇಕೆ ಅವರ ಮಾತಿಗೆ ಬೆಲೆ ಕೊಡಬೇಕು. ಆಧಾರ ರಹಿತ ಟೀಕೆಗಳಿಗೆ ಅರ್ಥವಿಲ್ಲ ಎಂದರು. ಬಿಜೆಪಿ ಶಾಸಕ ಮುನಿರತ್ನ ಕಾಂಗ್ರೆಸ್‌ನಲ್ಲೇ ಇದ್ದವರು. ಸಲುಗೆಯಿಂದ ಅವರನ್ನು ‘ಕರಿ ಟೋಪಿ’ ಎಂದು ಕರೆದಿರಬಹುದು. ಅದನ್ನು ದೊಡ್ಡದು ಮಾಡುವ ಅವಶ್ಯಕತೆಯಿಲ್ಲ‘ ಎಂದು ಪ್ರತಿಕ್ರಿಯಿಸಿದರು.
‘ಡಿ.ಕೆ.ಶಿವಕುಮಾರ್ ಅವರಿಗೆ ಶಿಷ್ಟಾಚಾರ ಗೊತ್ತಿದೆ. ಡಿಸಿಎಂ ಭೇಟಿ ವೇಳೆ ಶಾಸಕರನ್ನು ಕರಿಯಲೇಬೇಕು ಎಂದಿಲ್ಲ. ಮುನಿರತ್ನ ಅವರಿಗೆ ಜನರ ಕಾಳಜಿ ಇದ್ದರೆ ಹೋಗಬೇಕಿತ್ತು‘ ಎಂದು ತಿರುಗೇಟು ನೀಡಿದರು.
Advertisement