
ಬೆಂಗಳೂರು: ಸ್ಥಳೀಯ ಶಾಸಕರಿಗೆ (ಮುನಿರತ್ನ) ರಾಜಕೀಯ ಮುಖ್ಯವಾಗಿದೆ. ಆರ್ಎಸ್ಎಸ್ ಗಣವೇಷ ಧರಿಸಿ ಆಗಮಿಸುವ ಮೂಲಕ ಶಾಸಕರು ಆರ್ಎಸ್ಎಸ್ಗೆ ಅವಮಾನ ಮಾಡಿದ್ದಾರೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಹೇಳಿದರು.
ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ಗೂ ಈ ಕಾರ್ಯಕ್ರಮಕ್ಕೂ ಏನು ಸಂಬಂಧ? ಆ ಸಂಸ್ಥೆಗೆ ಇತಿಹಾಸವಿದೆ. ಇಲ್ಲಿಗೆ ಆ ಸಂಸ್ಥೆಯ ಟೋಪಿ, ಸಮವಸ್ತ್ರ ಧರಿಸಿ ಬರುವ ಅವಶ್ಯಕತೆ ಏನಿತ್ತು? ಆ ಸಂಸ್ಥೆ ತನ್ನದೇ ಆದ ಕೆಲಸ ಮಾಡುತ್ತಿದೆ. ಅವರು ಮಾಡಿದ ಕೆಲಸ ನನಗೆ ಮಾಡಿದ ಅವಮಾನವಲ್ಲ. ಆ ಸಂಸ್ಥೆಗೆ ಮಾಡಿದ ಅವಮಾನ ಎಂದು ಹೇಳಿದರು.
ಶಾಸಕರನ್ನು ನಾಗರಿಕರೇ ಒಡೆದು ಓಡಿಸುತ್ತಿದ್ದರು. ಅವರ ವರ್ತನೆಯಿಂದ ಜನಕ್ಕೆ ಅಷ್ಟು ರೋಷ ಬಂತು. ಇದು ಯಾವುದೇ ಶಿಲಾನ್ಯಾಸ ಕಾರ್ಯಕ್ರಮವಲ್ಲ. ಎಲ್ಲಾ ಸಾರ್ವ ಜನಿಕರಿಗೂ ಕಾರ್ಯಕ್ರಮಕ್ಕೆ ಮುಕ್ತ ಆಹ್ವಾನವಿದೆ. ಜನರ ಸಮಸ್ಯೆಗಳನ್ನು ಅರಿಯುವ ಕಾರ್ಯಕ್ರಮ, ಜನಪ್ರತಿ ನಿಧಿಗೆ ಏನು ಗೌರವ ನೀಡಬೇಕೊ ಅದನ್ನು ನೀಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರು ನಾಗರಿಕರ ಜತೆ ನಡಿಗೆ ಗೆ ಎಲ್ಲರಿಗೂ ಆಹ್ವಾನ ಕೊಟ್ಟಿದ್ದೇನೆ. ಬೆಳಗ್ಗೆಯಿಂದ ಎರಡು ತಾಸು ನಡೆದು ಸಮಸ್ಯೆ ಕೇಳಿದ್ದೇನೆ. ಎಲ್ಲರ ಮಾಹಿತಿ, ಮೊಬೈಲ್ ನಂಬರ್ ತಗೊಂಡಿದ್ದು ಸಂಪರ್ಕ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ. ಇನ್ನುಳಿದ ಜನರು 1533ಗೆ ಕರೆ ಮಾಡಿ ಸಮಸ್ಯೆ ಹೇಳಲು ಅವಕಾಶ ಇದೆ ಎಂದರು.
ಗುತ್ತಿಗೆದಾರರ ಬಿಲ್ ಬಾಕಿ ಪಾವತಿ ಮಾಡಲು ಮಾಡಲು ಕಮಿಷನ್ ಕೇಳುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಂಡೆ. ಜೆಪಿ ಪಾರ್ಕ್‌ನಲ್ಲೂ ಕೂಡ ಸಾಕಷ್ಟು ಕೆಲಸ ನಿಂತು ಹೋಗಿದ್ದು, ಶೌಚಾಲಯ, ಈಜುಕೊಳ, ಟ್ರ‍್ಯಾಕ್ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ಮಳೆ ನೀರು, ರಸ್ತೆ ಎಲ್ಲಾ ಸಮಸ್ಯೆಯನ್ನು ಬಗೆ ಹರಿಸುತ್ತೇವೆ. ಸಾರ್ವಜನಿಕರ ಧ್ವನಿ ಸರಕಾರಕ್ಕೆ ಮುಟ್ಟಬೇಕು. ಅದಕ್ಕೆ ಸರಕಾರ ಸ್ಪಂದಿಸಬೇಕು ಎಂದು ಹೇಳಿದರು.
Advertisement