
ಕಾರವಾರ: ನಾನು ಮುಖ್ಯಮಂತ್ರಿ ಆಗಿದ್ದರೆ ರಾಜ್ಯ ಸರ್ಕಾರದ ಐದು ಖಾತರಿಗಳನ್ನು ಜಾರಿಗೆ ತರುತ್ತಿರಲಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಮತ್ತು ಮಾಜಿ ಸಚಿವ ಆರ್‌ವಿ ದೇಶಪಾಂಡೆ ಭಾನುವಾರ ಹೇಳಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೇಳಿದ್ದಾರೆ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ನವಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸರ್ಕಾರಿ ಬಸ್‌ಗಳು ಈಗ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು, ಪುರುಷರಿಗೆ ಜಾಗವಿಲ್ಲದಂತಾಗಿದೆ ಎಂದಿದ್ದಾರೆ.
'ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿತು. ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿದ್ದು, ಇದು ಅವರಿಗೆ ಲಾಟರಿ ಹೊಡೆದಂತಾಗಿದೆ. ಪುರುಷರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಪುರುಷರು ಹೆಚ್ಚು ಮಾತನಾಡಿದರೆ, ಅವರಿಗೆ ಶಿಕ್ಷೆಯಾಗುತ್ತದೆ. ಸಿದ್ದರಾಮಯ್ಯನವರಿಗೆ ಯಾರು ಸಲಹೆ ನೀಡಿದ್ದಾರೋ ದೇವರೇ ಬಲ್ಲ. ನಾನು ಮುಖ್ಯಮಂತ್ರಿಯಾಗಿದ್ದರೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರಲಿಲ್ಲ' ಎಂದು ಹೇಳಿದರು.
ಮಹಿಳೆಯರಿಗೆ ಐಷಾರಾಮಿಯಲ್ಲದ ರಾಜ್ಯ ಬಸ್‌ಗಳಲ್ಲಿ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಕುರಿತು ಮಾತನಾಡಿದ ಅವರು, 'ಬಸ್‌ಗಳು, ಓ ದೇವರೇ! ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಯೆಲ್ಲಮ್ಮ ದೇವಸ್ಥಾನಕ್ಕೆ ಮಹಿಳೆಯರು ಹೊರಟಿದ್ದಾರೆ. ಈ ಎಲ್ಲ ಸ್ಥಳಗಳಲ್ಲಿ ಮಹಿಳೆಯರು ಇದ್ದಾರೆ. ಪುರುಷರು ತಪ್ಪಾಗಿ ಬಸ್ ಹತ್ತಿದರೆ, ಅವರು ಪರದಾಡುವಂತಾಗುತ್ತದೆ. ಇವು ಮಹಿಳೆಯರ ಬಸ್‌ಗಳು ಎನ್ನುವಂತಾಗಿದೆ. ಇವು ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳು' ಎಂದು ತಮ್ಮದೇ ಪಕ್ಷದ ವಿರುದ್ಧ ಆರ್‌ವಿ ದೇಶಪಾಂಡೆ ಅಸಮಾಧಾನ ಹೊರಹಾಕಿದ್ದಾರೆ.
ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯ ಬಗ್ಗೆಯೂ ಮಾತನಾಡಿದ ಅವರು, 'ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆಜಿಯಿಂದ 10 ಕೆಜಿಗೆ ಉಚಿತವಾಗಿ ನೀಡಲಾಗುವ ಅಕ್ಕಿಯನ್ನು ಹೆಚ್ಚಿಸಲಾಗಿದೆ. ಮಹಿಳೆಯರು ಅವುಗಳನ್ನು ತೆಗೆದುಕೊಂಡು ಆನಂದಿಸಲಿ' ಎಂದು ಹೇಳಿದರು.
'ಮುಖ್ಯಮಂತ್ರಿಗಳು ಇಂದಿರಾ ಕಿಟ್ ಅನ್ನು ವಿತರಿಸಲು ಯೋಜಿಸಿದ್ದಾರೆ. ಇದರಲ್ಲಿ ತೊಗರಿ ಬೇಳೆ, ಒಣ ತೆಂಗಿನಕಾಯಿ ಮತ್ತು ಅಡುಗೆ ಎಣ್ಣೆ ಸೇರಿವೆ. ಅವರು ಇನ್ನೇನು ನೀಡಲಿದ್ದಾರೆಂದು ನಮಗೂ ತಿಳಿದಿಲ್ಲ. ಸಿದ್ದರಾಮಯ್ಯ ಏನು ಮ್ಯಾಜಿಕ್ ಮಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ನನಗೆ ಅರ್ಥವಾಗುತ್ತಿಲ್ಲ' ಎಂದು ಅವರು ಹೇಳಿದರು.
ಸ್ಪಷ್ಟನೆ ಕೋರಿದ ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿರುವ ಆರ್‌ವಿ ದೇಶಪಾಂಡೆ ಅವರಿಗೆ ಕರೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಸ್ಪಷ್ಟನೆ ನೀಡುವುದಾಗಿ ಸಿಎಂಗೆ ದೇಶಪಾಂಡೆ ಸೂಚಿಸಿರುವುದಾಗಿ ವರದಿಯಾಗಿದೆ.
ಅವರು ಸಿಎಂ ಆದಾಗ ಗ್ಯಾರಂಟಿ ನಿಲ್ಲಿಸಲಿ: ಜಿ ಪರಮೇಶ್ವರ
ಆರ್‌ವಿ ದೇಶಪಾಂಡೆ ಹೇಳಿಕೆ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ, ಅವರು ಸಿಎಂ ಆದಾಗ ಬೇಕಿದ್ರೆ ಗ್ಯಾರಂಟಿ ನಿಲ್ಲಿಸಲಿ. ಅಭಿವೃದ್ಧಿ ಕುಂಠಿತವಾಗಿರುವುದು ಎಲ್ಲಿ? ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ ನೀಡುತ್ತಿದ್ದಾರೆ. ನಮ್ಮ ಜಿಲ್ಲೆಗೆ ಸಿಎಂ ಮೂರು ಬಾರಿ ಭೇಟಿ ನೀಡಿದ್ದಾರೆ. ಇವರು ಹೇಳಿದ್ರೆ ಮಾತ್ರ ಅಭಿವೃದ್ಧಿ ಕುಂಠಿತ ಆಗಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ, ಅದು ಸರ್ಕಾರದ ಅಭಿಪ್ರಾಯ ಅಲ್ಲ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೇ 20, 2023 ರಂದು ಚುನಾವಣಾ ಪೂರ್ವ ಐದು ಖಾತರಿ ಯೋಜನೆಗಳ ಅನುಷ್ಠಾನವನ್ನು ಘೋಷಿಸಿತು. ರಾಜ್ಯ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಯೋಜನೆಗಳಿಗೆ 51,034 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ.
ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನಿಂದ ಟೀಕೆಗಳು ಬಂದಿವೆ. ಜೊತೆಗೆ ಕೆಲವು ಆಡಳಿತಾರೂಢ ಕಾಂಗ್ರೆಸ್ ಶಾಸಕರು ಈ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
Advertisement