
ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಕಾಂಕ್ರೀಟ್ ಛಾವಣಿ ಕುಸಿದು ಬಿದ್ದಿದ್ದು, 'ಜಾತಿ ಗಣತಿ' ನಿಮಿತ್ತ ಶಾಲೆಗೆ ರಜೆ ಇದ್ದಿದ್ದರಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸೋಮವಾರ ಮಧ್ಯಾಹ್ನ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಕೋಣೆಯೊಳಗಿನ ಎಲ್ಲಾ ಪೀಠೋಪಕರಣಗಳು ನಾಶವಾಗಿವೆ ಮತ್ತು ಕಿಟಕಿಗಳು ಪುಡಿಪುಡಿಯಾಗಿವೆ.
50 ವರ್ಷ ಹಳೆಯದಾಗಿರುವ ಈ ಶಾಲಾ ಕಟ್ಟಡದಲ್ಲಿ ಕನ್ನಡ, ಉರ್ದು ಮತ್ತು ಮರಾಠಿ ಮಾಧ್ಯಮ ತರಗತಿಗಳನ್ನು ನಡೆಸಲಾಗುತ್ತಿತ್ತು. ಇಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ. ಆದರೆ ಜಾತಿ ಗಣತಿ ಹಿನ್ನೆಲೆಯಲ್ಲಿ ರಜೆ ನೀಡಲಾಗಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಇಡೀ ಕಟ್ಟಡ ಕುಸಿದು ಮಕ್ಕಳ ಪ್ರಾಣ ಕಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು ಎಂದು ನಿವಾಸಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
"ನಮ್ಮ ಶಾಲಾ ಕಟ್ಟಡ ಹೊರಗಿನಿಂದ ಚೆನ್ನಾಗಿ ಕಾಣುತ್ತದೆ. ಆದರೆ ಒಳಗಿನ ಸ್ಥಿತಿ ಭಯಾನಕವಾಗಿದೆ. ಎಲ್ಲಾ ಕೊಠಡಿಗಳ ಕಾಂಕ್ರೀಟ್ ಛಾವಣಿ ಕುಸಿದು ಬೀಳುವ ಹಂತದಲ್ಲಿದೆ. ದಸರಾ ರಜೆಯ ನಂತರ ಶಾಲೆ ಪ್ರಾರಂಭವಾದಾಗ, ನಾವು ಹೊರಗೆ ತರಗತಿಗಳನ್ನು ನಡೆಸುತ್ತೇವೆ" ಎಂದು ಶಿಕ್ಷಕರು ಹೇಳಿದ್ದಾರೆ.
Advertisement