ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಶಾಸಕ ಸ್ಥಾನ ಅಸಿಂಧು ಗೊಳಿಸಿ ಹೈಕೋರ್ಟ್ ಕೊಟ್ಟಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದೇ ವೇಳೆ ಮರುಮತ ಎಣಿಕೆ ನಡೆಸಲು ಕೋರ್ಟ್ ಸೂಚಿಸಿದ್ದು ಇದು ನಂಜೇಗೌಡರಿಗೆ ತುಸು ಸಮಾಧಾನ ತಂದಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ಮತ ಎಣಿಕೆಯಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಶಾಸಕ ಸ್ಥಾನ ರದ್ದು ಮಾಡಿದ್ದನ್ನು ಪ್ರಶ್ನಿಸಿ ಕೆವೈ ನಂಜೇಗೌಡ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ. ಜೊಯಮಲ್ಯ ಬಾಗ್ಚಿ ಅವರಿದ್ದ ಸದಸ್ಯ ಪೀಠ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು ನಾಲ್ಕು ವಾರಗಳಲ್ಲಿ ಮರು ಎಣಿಕೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಬೆಂಗಳೂರು ನಗರದ ರಸ್ತೆಗಳು ಇಷ್ಟೊಂದು ಹಾಳಾಗಿವೆ? ಕಂಡ ಕಂಡಲ್ಲಿ ಕಸದ ರಾಶಿ? ಇಲ್ಲಿನ ಸರ್ಕಾರ ಹೂಡಿಕೆದಾರರಿಗೆ ಬೆಂಬಲ ನೀಡುತ್ತಿಲ್ಲವೇ ಎಂದು ಬಯೋಕಾನ್ ಪಾರ್ಕ್ಗೆ ಬಂದಿದ್ದ ಚೀನಾ ಉದ್ಯಮಿಯೊಬ್ಬರು ನನ್ನನ್ನು ಪ್ರಶ್ನಿಸಿದ್ದಾರೆ ಎಂದು ಬಯೋಕಾನ್ ಕಂಪನಿ ಮುಖ್ಯಸ್ಥೆ ಮಜುಂದಾರ್ ಶಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಅದನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆಗೆ ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್ ಗೆ ರಾಜ್ಯ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶ, ಗುರುತು ಮತ್ತು ಯಶಸ್ಸನ್ನು ನೀಡಿದೆ. ಈ ನಗರಕ್ಕೆ ನಿರಂತರ ಟೀಕೆಗಳ ಬದಲಾಗಿ ಸಾಮೂಹಿಕ ಪ್ರಯತ್ನ ಬೇಕು ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿಗೆ ಕಿರಣ್ ಮಜುಂದಾರ್ ಅವರ ಕೊಡುಗೆ ಇದೆ. ಹಾಗೆಯೇ ಅವರಿಗೆ ಬೆಂಗಳೂರು ಎಲ್ಲವನ್ನು ಕೊಟ್ಟಿದೆ. ಮಳೆಯಿಂದಾಗಿ ಇಡೀ ರಾಜ್ಯದಲ್ಲಿ ಸಮಸ್ಯೆ ಆಗಿದೆ. ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆಯೇ ವಿನಃ ಬೆಂಗಳೂರಿನಿಂದ ಹೋಗುವವರ ಸಂಖ್ಯೆ ಕಡಿಮೆ ಇದೆ. ಕೆಲಸ ನಡೆಯುತ್ತಿರುವಾಗ, ಅದನ್ನು ಮತ್ತೆ ಟ್ವೀಟ್ ಮಾಡುವುದು ಒಳ್ಳೆಯ ಅಭಿರುಚಿಯಲ್ಲ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಸರ್ಕಾರಿ ಶಾಲೆ, ಕಾಲೇಜು ಹಾಗೂ ಇನ್ನಿತರ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಬೆನ್ನಲ್ಲೇ ನನಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರ್‌ಎಸ್‌ಎಸ್ ಗೆ ಅಂಕುಶ ಹಾಕಲು ನಾನು ಧೈರ್ಯ ಮಾಡಿದ್ದರಿಂದ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಬೆದರಿಕೆಗಳು, ಅತ್ಯಂತ ಕೆಟ್ಟ ನಿಂದನೆಗಳಿಂದ ತುಂಬಿಹೋಗಿವೆ. ಆದರೆ ನಾನು ಇದರಿಂದ ವಿಚಲಿತನಾಗುವುದಿಲ್ಲ ಅಥವಾ ಆಶ್ಚರ್ಯಪಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಮಹಾತ್ಮ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೇ ಬಿಡದ RSS, ನನ್ನನ್ನು ಬಿಡುತ್ತಾ? ಬೆದರಿಕೆಗಳು ಮತ್ತು ವೈಯಕ್ತಿಕ ನಿಂದನೆಗಳು ನನ್ನನ್ನು ಮೌನಗೊಳಿಸುತ್ತವೆ ಎಂದು ಭಾವಿಸಿದರೆ ಅದು ಅವರ ತಪ್ಪು ಭಾವನೆ. ಇದು ಕೇವಲ ಆರಂಭವಷ್ಟೇ ಎಂದು ಹೇಳಿದ್ದಾರೆ.
ಮಾಟಮಂತ್ರದಿಂದ ಮುಕ್ತಿ ಅಥವಾ 'ರಹಸ್ಯ ನಿಧಿಗಳನ್ನು ಪಡೆದುಕೊಳ್ಳಲು' ಪೂಜೆ ವಿಧಿ ವಿಧಾನಗಳನ್ನು ಮಾಡುವುದಾಗಿ ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ 49 ವರ್ಷದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೋಲಾರ ಮೂಲದ ದಾದಾ ಪೀರ್ ಎಂದು ಗುರುತಿಸಲಾಗಿದ್ದು, ಆತನಿಂದ 53 ಲಕ್ಷ ರೂ. ಮೌಲ್ಯದ 485.4 ಗ್ರಾಂ ಕದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೆಪ್ಟೆಂಬರ್ 26ರಂದು ಹುಳಿಮಾವು ಪೊಲೀಸರಿಗೆ ಬನ್ನೇರುಘಟ್ಟ ಮುಖ್ಯ ರಸ್ತೆಯ ಬಳಿ ಅನುಮಾನಾಸ್ಪದ ವ್ಯಕ್ತಿ ತಿರುಗಾಡುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಹೀಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ತಂಬಾಕು ಉತ್ಪನ್ನ ಪರೀಕ್ಷೆ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆಯಾಗಿ 4ನೇ ರಾಷ್ಟ್ರೀಯ ತಂಬಾಕು ಪರೀಕ್ಷಾ ಪ್ರಯೋಗಾಲಯವನ್ನು ಇಂದು ನಿಮ್ಹಾನ್ಸ್‌ನಲ್ಲಿ ಉದ್ಘಾಟಿಸಲಾಯಿತು. ಭಾರತದಲ್ಲಿ ಸದ್ಯ ಮೂರು ರಾಷ್ಟ್ರೀಯ ತಂಬಾಕು ಪರೀಕ್ಷಾ ಪ್ರಯೋಗಾಲಯಗಳಿವೆ. ನೋಯ್ಡಾ, ಮುಂಬೈ, ಗುವಾಹಟಿ ಬಳಿಕ ಇದೀಗ ಬೆಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪನೆಯಾಗಿದೆ. ಹೊಸ ಪ್ರಯೋಗಾಲಯವು, ತಂಬಾಕು ಉತ್ಪನ್ನಗಳಲ್ಲಿನ ರಾಸಾಯನಿಕ ಅಂಶ ಮತ್ತು ವಿಷಕಾರಿ ವಸ್ತುಗಳನ್ನು ಪರೀಕ್ಷೆ ಮತ್ತು ವಿಶ್ಲೇಷಣೆ ನಡೆಸಲಿದೆ. ಅಲ್ಲದೆ ತಂಬಾಕು ಉತ್ಪನ್ನಗಳನ್ನು ಮೌಲ್ಯಮಾಪನ ಮಾಡಲು ವೈಜ್ಞಾನಿಕ ಡೇಟಾವನ್ನು ಒದಗಿಸುತ್ತದೆ.
Advertisement