
ಬೆಂಗಳೂರು: ಉದ್ಯಮಿಗಳು, ಕೈಗಾರಿಕೆಗಳು ತಾವೇ ರಸ್ತೆ ಗುಂಡಿ ಮುಚ್ಚಬೇಕು ಎನ್ನುವುದಾದರೆ ಅವರು ತೆರಿಗೆ ಯಾಕೆ ಕಟ್ಟಬೇಕು? ಸರ್ಕಾರ ಯಾಕೆ ಇರಬೇಕು? ಸಚಿವರು ಯಾಕಿರಬೇಕು? ಗ್ರೇಟರ್ ಬೆಂಗಳೂರು ಪ್ರಾಧಿಕಾರ ಯಾಕೆ ಬೇಕು? ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಿವೆ.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನ ರಸ್ತೆಗಳು ಮತ್ತು ಕಸದ ಸಮಸ್ಯೆ ಬಗ್ಗೆ ವಿದೇಶಿ ಉದ್ಯಮಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನಗರದಲ್ಲಿನ ರಸ್ತೆಗಳ ಕಳಪೆ ಸ್ಥಿತಿ ಮತ್ತು ಸಂಚಾರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಮತ್ತೆ ತೀವ್ರ ಟೀಕೆಗೆ ಗುರಿಯಾಗಿದೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, "ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶ, ಗುರುತು ಮತ್ತು ಯಶಸ್ಸನ್ನು ನೀಡಿದೆ. ಈ ನಗರಕ್ಕೆ ನಿರಂತರ ಟೀಕೆಗಳ ಬದಲಾಗಿ ಸಾಮೂಹಿಕ ಪ್ರಯತ್ನದ ಅಗತ್ಯ ಇದೆ ಎಂದು ಹೇಳಿದ್ದರು.
ಈ ಹೇಳಿಕೆ ಇದೀಗ ವಿರೋಧಕ್ಕೆ ಕಾರಣವಾಗಿದೆ. ಸರ್ಕಾರವನ್ನು ಟೀಕಿಸಿರುವ ರಾಜ್ಯ ಬಿಜೆಪಿ, ಉದ್ಯಮಿಗಳು, ಕೈಗಾರಿಕೆಗಳು ತಾವೇ ರಸ್ತೆ ಗುಂಡಿ ಮುಚ್ಚಬೇಕು ಎನ್ನುವುದಾದರೆ ಅವರು ತೆರಿಗೆ ಯಾಕೆ ಕಟ್ಟಬೇಕು? ಸರ್ಕಾರ ಯಾಕೆ ಇರಬೇಕು? ಸಚಿವರು ಯಾಕಿರಬೇಕು? GBA ಯಾಕೆ ಬೇಕು? ಎಂದು ಪ್ರಶ್ನಿಸಿದೆ.
ಬೆಂಗಳೂರಿನ ರಸ್ತೆಗುಂಡಿಗಳ ದುಸ್ಥಿತಿ ಬಗ್ಗೆ ಉದ್ಯಮಿಗಳು, ಸಾರ್ವಜನಿಕರು ದನಿ ಎತ್ತಿದರೆ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ವಿಶ್ವಾಸ ತುಂಬುವುದು ಬಿಟ್ಟು ಕಾಂಗ್ರೆಸ್ ಸರ್ಕಾರದ ಸಚಿವರು ಅವರ ಮೇಲೇ ಮುಗಿ ಬೀಳುತ್ತಿದ್ದಾರೆ.
ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಡಿಸಿಎಂ ಡಿಕೆ.ಶಿವಕುಮಾರ್ ಅವರು ನೋಡಿದರೆ "ಇದ್ದರೆ ಇರಿ ಇಲ್ಲವೇ ಹೋಗಿ" ಎನ್ನುವ ಬೇಜವಾಬ್ದಾರಿ ಮಾತುಗಳ ಮೂಲಕ ಉದ್ಯಮಿಗಳ, ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಇನ್ನು ಸದಾ ಆರ್ ಎಸ್ಎಸ್ ಜಪದಲ್ಲಿ ಬ್ಯುಸಿ ಆಗಿರುವ ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಅವರ ಖಾತೆ ಯಾವುದು, ಅವರ ಜವಾಬ್ದಾರಿ ಏನು ಎನ್ನುವುದೇ ನನಪಿದ್ದಂತಿಲ್ಲ.
ಆದರೆ ತಮ್ಮಂತಹ ಹಿರಿಯ ಅನುಭವಿ ಸಚಿವರಿಂದ ಈ ರೀತಿಯ ಬೇಜವಾಬ್ದಾರಿ ಮಾತುಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಉದ್ಯಮಿಗಳು, ಕೈಗಾರಿಕೆಗಳು ತಾವೇ ರಸ್ತೆ ಗುಂಡಿ ಮುಚ್ಚಬೇಕು ಎನ್ನುವುದಾದರೆ ಅವರು ತೆರಿಗೆ ಯಾಕೆ ಕಟ್ಟಬೇಕು? ಸರ್ಕಾರ ಯಾಕೆ ಇರಬೇಕು? ಸಚಿವರು ಯಾಕಿರಬೇಕು? GBA ಯಾಕೆ ಬೇಕು? ಎಂದು ಪ್ರಶ್ನಿಸಿದೆ.
ಪ್ರಜಾಪ್ರಭುತ್ವದ ಪಾಲುದಾರರಾದ ಉದ್ಯಮಿಗಳು, ಸಾರ್ವಜನಿಕರು ಟೀಕೆ ಮಾಡುವುದು ಸಹಜ. ಅದು ಮತದಾರರ ಸಂವಿಧಾನದತ್ತ ಹಕ್ಕು. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸ್ಪಂದಿಸುವುದು ಬಿಟ್ಟು ಈ ರೀತಿ ಬೇಜವಾಬ್ದಾರಿಯ ಮಾತುಗಳನ್ನು ಆಡಿದರೆ ಕರ್ನಾಟಕದ ಪ್ರಜ್ಞಾವಂತ ಮತದಾರರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡುವುದು ಗ್ಯಾರೆಂಟಿ ಎಂದು ತಿಳಿಸಿದ್ದಾರೆ.
Advertisement