
ಬೀದರ್: ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹೊಸ ಮಸೂದೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಈ ವಿಚಾರವನ್ನು ತಿಳಿಸಿದರು.
ರಾಜ್ಯದ ದುಡಿಯುವ ಜನರಲ್ಲಿ ಶೇ.85ರಷ್ಟು ಅಸಂಘಟಿತ ವಲಯದ ಕಾರ್ಮಿಕರಾಗಿದ್ದಾರೆ. ವಿವಿಧ ವಲಯದಲ್ಲಿ ಕಾರ್ಯ ನಿರ್ವಹಿಸುವುದರ ಮೂಲಕ ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹೊಸ ಮಸೂದೆಯನ್ನು ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಸಂಪುಟ ವಿಸ್ತರಣೆಯ ಕುರಿತ ಪ್ರಶ್ನೆಗೆ ಉತ್ತರಿಸಿ, ಪ್ರತಿಯೊಬ್ಬರಿಗೂ ಸಚಿವ ಸ್ಥಾನ ಕೇಳುವ ಹಕ್ಕಿದೆ. ಆದರೆ, ಈ ಬಗ್ಗೆ ಪಕ್ಷದ ಹೈಕಮಾಂಡ್ ಅನ್ನು ಕೇಳುವ ಬದಲು ಮಾಧ್ಯಮಗಳ ಮುಂದೆ ಚರ್ಚಿಸುವುದು ಸಮಂಜಸವಲ್ಲ ಎಂದು ತಿಳಿಸಿದರು.
ಸಂಪುಟ ವಿಸ್ತರಣೆಯ ಅಗತ್ಯವಿದೆ. ಆದರೆ, ಈ ವಿಚಾರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಬಿಟ್ಟದ್ದು ಎಂದು ಹೇಳಿದರು.
ವ್ಯಾಪಂ ಪ್ರಕರಣದಲ್ಲಿ 44 ಸಾಕ್ಷಿಗಳು ಕೊಲ್ಲಲ್ಪಟ್ಟಿದ್ದರೂ, ಪ್ರಧಾನಿ ಮೋದಿ ಅಥವಾ ಬಿಜೆಪಿ ಮೌನ ತಾಳಿದ್ದಾರೆ. ಈ ಹಿಂದೆ ತಾಲಿಬಾನ್ ಅನ್ನು ವಿರೋಧಿಸುತ್ತಿದ್ದ ಬಿಜೆಪಿ, ಉತ್ತರ ಪ್ರದೇಶದಲ್ಲಿ ತಾಲಿಬಾನ್ ಅನ್ನು ಸ್ವಾಗತಿಸಿ, ಅವರಿಗೆ ಗೌರವ ಸಲ್ಲಿಸಿ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನೀಡಿದ್ದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು,
ನಮ್ಮ ಯುಪಿಎ ಸರ್ಕಾರವು ಮೊದಲ ಮತ್ತು ಎರಡನೇ ಅವಧಿಯಲ್ಲಿ ಒಟ್ಟು 80,000 ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕಿತ್ತು. ಆದರೆ, 11 ವರ್ಷಗಳ ಅಧಿಕಾರದಲ್ಲಿ ಕೇವಲ 6,000 ನುಸುಳುಕೋರರನ್ನು ಹೊರಹಾಕುವ ಮೂಲಕ ಯಶಸ್ಸನ್ನು ಸಾಧಿಸಿದ್ದೇವೆಂದು ಬಿಜೆಪಿ ಹೇಳುತ್ತಿದೆ ಎಂದು ವ್ಯಂಗ್ಯವಾಡಿದರು.
ಆರ್‌ಎಸ್‌ಎಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿಗಳು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಪರಿಶೀಲಿಸುವಂತೆ ತಿಳಿಸಿದ್ದಾರೆ ಎಂದು ಹೇಳಿದರು.
Advertisement