ಹೊಸದಾಗಿ 800 ಕೆಪಿಎಸ್ ಆರಂಭ: ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ; ಸಚಿವ ಮಧು ಬಂಗಾರಪ್ಪ

ಕೆಪಿಎಸ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ಒಂದೇ ಸೂರಿನಡಿ ವಿದ್ಯಾಬ್ಯಾಸಕ್ಕೆ ಅನುಕೂಲ ಕಲ್ಪಿಸಲಾಗಿದೆ.
Madhu Bangarappa
ಸಚಿವ ಮಧು ಬಂಗಾರಪ್ಪ
Updated on

ಬೆಂಗಳೂರು: ರಾಜ್ಯದಲ್ಲಿರುವ 800 ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (ಕೆಪಿಎಸ್) ಪರಿವರ್ತಿಸಲು ಯೋಜನೆ ರೂಪಿಸಲಾಗಿದ್ದು, ಈ ಯೋಜನೆಯಡಿ, ಪ್ರತಿ ಶಾಲೆಯನ್ನು 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ಒಂದೇ ಸೂರಿನಡಿ ವಿದ್ಯಾಬ್ಯಾಸಕ್ಕೆ ಅನುಕೂಲ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ, ಏಷ್ಯನ್ ಡೆವೆಲಪ್‍ಮೆಂಟ್ ಬ್ಯಾಂಕ್(ಎಡಿಬಿ) ಸಹಯೋಗದೊಂದಿಗೆ ರಾಜ್ಯ ಸರಕಾರದ ವತಿಯಿಂದ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು ಎಂದರು.

ಜೊತೆಗೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನಿಧಿಯ ಮೂಲಕ 200 ಶಾಲೆಗಳನ್ನು, ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ವತಿಯಿಂದ ಗಣಿ ಬಾಧಿತ 10 ತಾಲೂಕುಗಳಲ್ಲಿ 100 ಕೆಪಿಎಸ್ ಶಾಲೆಗಳನ್ನು ಉನ್ನತೀಕರಿಸಲು ಪ್ರತ್ಯೇಕ ಯೋಜನಾ ವರದಿಯನ್ನು(ಡಿಪಿಆರ್) ತಯಾರಿಸಲಾಗುವುದು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2 ರಿಂದ 3 ಕೆಪಿಎಸ್ ಶಾಲೆಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ತಾಲೂಕಿನಲ್ಲಿ 4 ರಿಂದ 5 ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಣ ಮಾಡಲಾಗುವುದು ಎಂದು ಅವರು ವಿವರಿಸಿದರು.

Madhu Bangarappa
ಈ ವರ್ಷದಿಂದ ಶೇ. 33 ಅಂಕ ಪಡೆದರೆ SSLC ಪಾಸ್: ಮಧು ಬಂಗಾರಪ್ಪ

ಈಗಾಗಲೇ ರಾಜ್ಯದಲ್ಲಿ 308 ಕೆಪಿಎಸ್‌ ಶಾಲೆಗಳಿವೆ. ಹಂತ ಹಂತವಾಗಿ ಪ್ರತಿ ಗ್ರಾಪಂಗೊಂದು ಕೆಪಿಎಸ್‌ ಶಾಲೆ ಮಾಡಿ ಆ ಶಾಲೆಗಳಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಕಡೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಮುಂದಿನ ವರ್ಷ 800 ಕೆಪಿಎಸ್‌ ಶಾಲೆಗಳನ್ನು ಆರಂಭಿಸಲಾಗುವುದು. ಈ ಶಾಲೆಗಳ ಸುತ್ತಲ 5 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಕಡಿಮೆ ಮಕ್ಕಳಿರುವ ಶಾಲೆಗಳ ಪೋಷಕರು, ಮಕ್ಕಳು ಮತ್ತು ಎಸ್‌ಡಿಎಂಸಿಗಳ ಒಪ್ಪಿಗೆ ನೀಡಿದರೆ ವಿಲೀನ ಮಾಡುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.

ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಶಿಕ್ಷಣ ಸುಧಾರಣಾ ಸಮಿತಿ ರಚಿಸಲಾಗುತ್ತದೆ. ಈ ಯೋಜನೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಕಲಿಕಾ ಗುಣಮಟ್ಟ ಹೆಚ್ಚಿಸಲು ಸರ್ಕಾರ ಬದ್ಧತೆ ಹೊಂದಿದೆ. ಕೆಪಿಎಸ್‌ ಶಾಲೆಗಳೂ ಸೇರಿ ಎಲ್ಲ ಸರ್ಕಾರಿ ಶಾಲೆಗಳಿಗೂ ಇನ್ನು ಮುಂದೆ ನವೆಂಬರ್‌ ತಿಂಗಳಿಂದಲೇ ದಾಖಲಾತಿ ಆಂದೋಲನ ನಡೆಸಲಾಗುವುದು ಎಂದು ಹೇಳಿದರು.

ಕೆಪಿಎಸ್ ಶಾಲೆಗಳಿಗೆ 5 ಕಿ.ಮೀ. ವ್ಯಾಪ್ತಿಯ ಊರುಗಳಿಂದ ಮಕ್ಕಳನ್ನು ಕರೆದುಕೊಂಡು ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿ ಶಾಲೆಯಲ್ಲಿ ಕನಿಷ್ಠ 1200 ರಿಂದ ಗರಿಷ್ಠ 1800 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಎಲ್‌ಕೆಜಿ, ಯುಕೆಜಿಗೆ ಕನಿಷ್ಠ 40ರಿಂದ 50 ಮಕ್ಕಳು, ಉಳಿದ ತರಗತಿಗಳಿಗೆ ಕನಿಷ್ಠ 50ರಿಂದ 60 ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಈ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ದ್ವಿಭಾಷಾ ಮಾಧ್ಯಮ ಬೋಧನೆ ಇರುತ್ತದೆ. ಜೊತೆಗೆ 1ನೇ ತರಗತಿಯಿಂದಲೇ ಮಕ್ಕಳಿಗೆ ಕಂಪ್ಯೂಟರ್‌ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.

ಪ್ರಾಥಮಿಕ, ಪ್ರೌಡ ಮತ್ತು ಪಿಯುಸಿ ಎಂದು ನಮ್ಮ ಇಲಾಖೆಯಲ್ಲಿ ವಿಭಾಗಿಸಲಾಗಿದೆ. ಇದನ್ನೆಲ್ಲ ಒಟ್ಟುಗೂಡಿಸಿ, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಶಿಕ್ಷಣ ಸುಧಾರಣಾ ಸಮಿತಿಯನ್ನು ರಚಿಸಲಾಗುವುದು. ಈ ಯೋಜನೆಯು ರಾಜ್ಯದಲ್ಲಿನ ಸರಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿ, ಗುಣಮಟ್ಟದ ಶಿಕ್ಷಣವನ್ನು ನೀಡುವಂತೆ ಮಾಡುತ್ತದೆ ಎಂದು ಅವರು ತಿಳಿಸಿದರು.

Madhu Bangarappa
ರಾಮನಗರ ಜಿಲ್ಲೆಯಲ್ಲಿ ನಾಲ್ಕು ಕೆಪಿಎಸ್ ಶಾಲೆಗಳ ನಿರ್ಮಾಣ: ಡಿಸಿಎಂ ಡಿ.ಕೆ.ಶಿವಕುಮಾರ್

ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅಸ್ತಿತ್ವದಲ್ಲಿರುವ ಶಾಲೆಗಳನ್ನು ಕೆಪಿಎಸ್‌ಗೆ ಪರಿವರ್ತಿಸುವ ಬಗ್ಗೆ ಶಿಕ್ಷಕ ಸಮುದಾಯ ಸಂತೋಷಪಟ್ಟಿದ್ದರೂ, ಕರ್ನಾಟಕ ಸಾರ್ವಜನಿಕ ಶಾಲೆಗಳಲ್ಲಿ ಉತ್ತಮ ಅರ್ಹ ಇಂಗ್ಲಿಷ್ ಶಿಕ್ಷಕರನ್ನು ನೇಮಿಸುವಲ್ಲಿ ಸರ್ಕಾರ ವಿಫಲವಾಗಿದೆ.

ಪ್ರಸ್ತುತ, ಕನ್ನಡವನ್ನು ಕಲಿಸುವ ಶಿಕ್ಷಕರು ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್ ಸೇರಿದಂತೆ ಇತರ ವಿಷಯಗಳನ್ನು ಕಲಿಸುತ್ತಾರೆ. ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ನೀಡಲು ಸರ್ಕಾರವು ಕೆಪಿಎಸ್ ಶಾಲೆಗಳನ್ನು ಪರಿಚಯಿಸಿತು. ಆದ್ದರಿಂದ, ಈ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಕೆಪಿಎಸ್ ಆಗಿ ಪರಿವರ್ತಿಸುವ ಮೊದಲೇ, ಅವರು ಇಂಗ್ಲಿಷ್‌ನಲ್ಲಿ ವಿಭಿನ್ನ ವಿಷಯಗಳನ್ನು ಕಲಿಸಲು ಉತ್ತಮ ಅರ್ಹ ಶಿಕ್ಷಕರನ್ನು ಒದಗಿಸಲಿ" ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com