
ಮೈಸೂರು: ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ -ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದು ನಿರಾಕರಿಸಿರುವುದು ಭಾರೀ ಸುದ್ದಿಯಾಗಿದೆ. ಕಾಂಗ್ರೆಸ್ ನ ಹಲವು ನಾಯಕರು ದಂಪತಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇನ್ಫೋಸಿಸ್ ನವರೇನು ಬೃಹಸ್ಪತಿಗಳಾ, ನಾವು ನಡೆಸುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ, ಅವರಿಗೆ ಅದು ಅರ್ಥವಾಗದಿದ್ದರೆ ನಾವು ಏನು ಮಾಡಲು ಸಾಧ್ಯ ಎಂದು ಕೇಳಿದರು.
ಇದು ಹಿಂದುಳಿದವರ ಸಮೀಕ್ಷೆಯಲ್ಲ, ಇಡೀ ರಾಜ್ಯದ ಏಳು ಕೋಟಿ ಜನರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎಂದು 20 ಸಲ ಹೇಳಿದ್ದೇವೆ. ಜಾಹಿರಾತು ಕೂಡ ಕೊಟ್ಟಿದ್ದೇವೆ. ನಮ್ಮ ಸರ್ಕಾರ ಶಕ್ತಿ, ಗೃಹಲಕ್ಷ್ಮಿ, ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದೇವೆ. ಅವುಗಳ ಲಾಭವನ್ನು ಮೇಲ್ಜಾತಿಯವರು ಪಡೆದುಕೊಳ್ಳುವುದಿಲ್ಲವೇ, ನಾರಾಯಣ ಮೂರ್ತಿ, ಸುಧಾಮೂರ್ತಿಯವರು ಇದು ಹಿಂದುಳಿದ ವರ್ಗದವರ ಸಮೀಕ್ಷೆ ಎಂದು ಭಾವಿಸಿದರೆ ಅದು ತಪ್ಪು. ಮುಂದೆ ಕೇಂದ್ರ ಸರ್ಕಾರ ಜನಗಣತಿ ಮಾಡುತ್ತದೆ, ಆಗ ಅವರು ಏನು ಹೇಳುತ್ತಾರೆ ಎಂದು ಕೇಳಿದರು.ಅವರಿಗೆ ತಪ್ಪು ಮಾಹಿತಿ ಇರಬಹುದು, ಏನಿದ್ದರೂ ಅವರ ಇಷ್ಟ ಎಂದು ಸಿಎಂ ಹೇಳಿದರು.
ನವೆಂಬರ್ ಬದಲಾವಣೆ ಕಡೆಗಣಿಸಿ
ನವೆಂಬರ್ ಕ್ರಾಂತಿ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ರಾಂತಿ ಎಂದರೇನು? ಬದಲಾವಣೆ ಎಂಬುದು ಕ್ರಾಂತಿ ಅಲ್ಲ. ಅವರಿಗೂ ಕೆಲಸ ಇಲ್ಲ, ಕ್ರಾಂತಿಯೂ ಆಗಲ್ಲ, ಭ್ರಾಂತಿಯೂ ಆಗಲ್ಲ. ಈ ಬಗ್ಗೆ ಯಾರು ಹೇಳಿದರೂ ಮಾಧ್ಯಮದವರು ನಿರ್ಲಕ್ಷಿಸಬೇಕು ಎಂದರು.
ಆರ್ಎಸ್ಎಸ್ ಸೇರಿದಂತೆ ಇತರೆ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ
ಶಾಲಾ ಆವರಣದಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಬಗ್ಗೆ 2013 ರಲ್ಲಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ಸರ್ಕಾರಿ ಆದೇಶ ಹೊರಡಿಸಿರುವ ಬಗ್ಗೆ ಮಾತನಾಡಿದ ಅವರು, ಕೇವಲ ಆರ್.ಎಸ್.ಎಸ್ ಚಟುವಟಿಕೆಗಳಿಗೆ ಮಾತ್ರವಲ್ಲ, ಎಲ್ಲಾ ಸಂಘ- ಸಂಸ್ಥೆಗಳ ಚಟುವಟಿಕೆಗಳ ಮೇಲೂ ಸರ್ಕಾರಿ ಆದೇಶ ಅನ್ವಯವಾಗುತ್ತದೆ. ಸರ್ಕಾರಿ ಶಾಲೆ, ಆಟದ ಮೈದಾನ, ಸರ್ಕಾರಿ ಸ್ಥಳಗಳು, ಉದ್ಯಾನವನಗಳಲ್ಲಿ, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.
ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ
ಆಂಧ್ರಪ್ರದೇಶದಲ್ಲಿ ವಿದೇಶಿ ಕಂಪನಿಗಳು ಹೂಡಿಕೆ ಮಾಡುತ್ತಿರುವ ಬಗ್ಗೆ ಆಂಧ್ರದ ಸಚಿವರೊಬ್ಬರು ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೂಡಿಕೆದಾರರು ತಮಗೆ ಅನುಕೂಲಕರವಾದ ಪ್ರದೇಶಗಳಲ್ಲಿ ಬಂಡವಾಳ ಹೂಡುತ್ತಾರೆ. ಕರ್ನಾಟಕದಲ್ಲಿ ಬಹಳಷ್ಟು ಹೂಡಿಕೆದಾರರು ಬಂಡವಾಳ ಈಗಾಗಲೇ ಹೂಡಿಕೆ ಮಾಡಿದ್ದು, ಅವರಿಗೆ ಮೂಲ ಸೌಕರ್ಯಗಳ ಕೊರತೆಯಾಗಿರುವ ಬಗ್ಗೆ ದೂರಿದ್ದಾರೆಯೇ? ಐಫೋನ್ ತಯಾರಿಕೆಯ ದೊಡ್ಡ ಹೂಡಿಕೆ ಕರ್ನಾಟಕದಲ್ಲಿಯೇ ಆಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾರತದ ಹೂಡಿಕೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದರು.
ಸರ್ಕಾರದ ವಿರುದ್ಧ ಉದ್ದೇಶಪೂರ್ವಕ ಆರೋಪ
ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಸರ್ಕಾರದಲ್ಲಿಯೂ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ, ಆರೋಪ ಮಾಡುತ್ತಿರುವವರು ನ್ಯಾಯಾಲಯದ ಮೊರೆ ಹೋಗಲಿ. ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಆರೋಪಿಸಲಾಗುತ್ತಿದೆ ಎಂದು ಹೇಳಿದರು.
ಬಿಹಾರ ರಾಜ್ಯದ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಗೆಲ್ಲಲಿದೆ. ಜನ ಬದಲಾವಣೆ ಬಯಸುತ್ತಿದ್ದಾರೆ. ಬದಲಾವಣೆ ಆಗುತ್ತದೆ ಎಂಬ ನಂಬಿಕೆ ಇದೆ. ರಾಹುಲ್ ಗಾಂಧಿಯವರ ಪಾದಯಾತ್ರೆಯ ಸಂದರ್ಭದಲ್ಲಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದ್ದು, ಗೆಲುವು ನಮ್ಮದಾಗಲಿದೆ ಎಂದರು.
Advertisement