
ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಅಳವಡಿಸಿದ್ದ ಬ್ಯಾನರ್ ಗಳು ಮತ್ತು ಭಗವಾಧ್ವಜಗಳನ್ನು ತೆಗೆದುಹಾಕಲಾಗಿದ್ದು, ಈ ಸಂಬಂಧ ರಾಜ್ಯ ಬಿಜೆಪಿ ಶನಿವಾರ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಆದರೆ ಕೇಸರಿ ಸಂಘಟನೆಯು ಈ ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯ ಎಂಬ ನಿಯಮ ಜಾರಿಗೆ ತರಲು ನಿರ್ಧರಿಸಿದ ಸಮಯದಲ್ಲಿ ಆರ್‌ಎಸ್‌ಎಸ್ ಭಾನುವಾರ ಚಿತ್ತಾಪುರದಲ್ಲಿ 'ಪಥ ಸಂಚಲನ' ಕಾರ್ಯಕ್ರಮ ಆಯೋಜಿಸಿದ್ದು, ಇದು ತನ್ನ ಶಕ್ತಿ ಪ್ರದರ್ಶನವೆಂದು ಪರಿಗಣಿಸಲಾದ ರೂಟ್ ಮಾರ್ಚ್ ಆಗಿದೆ.
ನಾಳೆ 'ಪಥ ಸಂಚಲನದ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಇಂದು ಚಿತ್ತಾಪುರದಲ್ಲಿ ಭಗವಾಧ್ವಜ, ಫ್ಲೆಕ್ಸ್, ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹಾಕಿತ್ತು. ಆದರೆ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಎಂದು ಅವುಗಳನ್ನು ತೆಗೆದುಹಾಕಿದ್ದಾರೆ.
ಐಟಿ/ಬಿಟಿ ಸಚಿವ ಖರ್ಗೆ ಅವರು ಚಿತ್ತಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಚಿತ್ತಾಪುರ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೇ?
ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, "ಚಿತ್ತಾಪುರ ಭಾರತದಲ್ಲಿದೆಯೇ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೇ? ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, "(ಆರ್‌ಎಸ್‌ಎಸ್) ಅವರು ಅದಕ್ಕೆ ಅನುಮತಿ ಪಡೆದಿದ್ದಾರೆಯೇ" ಎಂದು ಕೇಳಿದ್ದಾರೆ. ಅಧಿಕಾರಿಗಳಿಂದ ಅನುಮತಿ ಪಡೆಯದೆ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದರು.
"ನನಗೆ ಇರುವ ಮಾಹಿತಿಯೆಂದರೆ ಅವರು(ಆರ್‌ಎಸ್‌ಎಸ್) ತಮ್ಮ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಅವರು ಅನುಮತಿ ಪಡೆದಿಲ್ಲ. ಆರ್‌ಎಸ್‌ಎಸ್ ಧ್ವಜ ಭಾರತದ ರಾಷ್ಟ್ರಧ್ವಜವೇ. ಅವರು ಕಾನೂನುಬಾಹಿರವಾಗಿ ಧ್ವಜ ಹಾಕುತ್ತಿದ್ದಾರೆ ಮತ್ತು ಅದಕ್ಕೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಸ್ವಯಂಸೇವಕರು, 'ಮತಾಂಧರು' ನನ್ನ ಮನೆಗೆ ನುಗ್ಗಿ ಹೊಡೆಯುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
"ನಾನು ಈ ಸಂಬಂಧ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡುತ್ತೇನೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಮತ್ತು ಶೀಘ್ರದಲ್ಲೇ ವಿವರಗಳನ್ನು ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕು ಎಂದು ಅವರು ಸ್ಪಷ್ಟಪಡಿಸಿದರು.
Advertisement