
ಬೆಂಗಳೂರು: ಆರ್‌ಎಸ್‌ಎಸ್ ರಾಜ್ಯ ಕಚೇರಿ ಕೇಶವ ಕೃಪಾಕ್ಕೆ ಮುತ್ತಿಗೆ ಹಾಕಲು ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಯತ್ನಿಸಿದ್ದು, ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಆರೋಪಿಸಿ, ರಾಜ್ಯ ಬಿಜೆಪಿ ನಾಯಕರು ನಗರ ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ಅವರಿಗೆ ಶುಕ್ರವಾರ ದೂರು ನೀಡಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನಿಲ್ ಕುಮಾರ್ ನೇತೃತ್ವದ ನಿಯೋಗ ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ಅವರನ್ನು ಭೇಟಿ ಮಾಡಿ, ದೂರು ಸಲ್ಲಿಸಿದೆ.
ಆರ್‌ಎಸ್‌ಎಸ್ ರಾಜ್ಯ ಕಚೇರಿ ಕೇಶವ ಕೃಪಾಕ್ಕೆ ಮುತ್ತಿಗೆ ಹಾಕಲು ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಐಯು ಸದಸ್ಯರು ಯತ್ನಿಸಿದ್ದಾರೆ. ಯಾವುದೇ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಸಲಿ, ಯಾವುದೇ ಪ್ರತಿಭಟನೆ ನಡೆಸುವ ಮೊದಲು ಪೊಲೀಸರ ಅನುಮತಿ ಪಡೆಯಬೇಕಿದೆ. ಆದರೆ, ಅನುಮತಿ ಇಲ್ಲದೆ ಇಲ್ಲಿ ಪ್ರತಿಭಟನೆ ನಡೆಸಲಾಗಿದೆ. ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು, ಪ್ರಸ್ತುತ ಘಟನೆ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಬೇಕು. ಅಲ್ಲದೆ, ಪ್ರತಿಭಟನೆ ನಡೆಸಲು ಸ್ಥಳಾವಕಾಶ ನೀಡಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರ್‌ಎಸ್‌ಎಸ್ ಕಚೇರಿ ಮುಂದೆ ಇಂದು ನಡೆದ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ ಪ್ರತಿಭಟನೆಯಾಗಿದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಎಲ್ಲಾ 33 ಸಚಿವರ ನಿವಾಸಗಳ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.
Advertisement