
ಬೆಂಗಳೂರು: RSS ವಿರುದ್ಧ ಹೋರಾಟ ಆರಂಭಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರಾಜ್ಯದ ವಿವಿಧೆಡೆಗಳಿಂದ ಬೆಂಬಲ ಸಿಗುತ್ತಿದೆ. ಈ ಮಧ್ಯೆ ಚಿತ್ತಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಸೋತಿದ್ದ ಮಣಿಕಂಠ ರಾಥೋಡ್, ಬಹಿರಂಗವಾಗಿ ಬೆದರಿಕೆಯ ಮಾತುಗಳನ್ನಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಪ್ರಿಯಾಂಕ್ ಖರ್ಗೆ RSS ಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಹೋದರೆ, ಇಷ್ಟು ದಿನ ಫೋನ್‌ನಲ್ಲಿ ಬೈಯುತ್ತಿದ್ದೇವೆ, ಮುಂದೆ ನಿಮ್ಮ ಮನೆಗೆ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಣಿಕಂಠ ರಾಥೋಡ್ ಬೆದರಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಇದು ನನಗೆ ಹೊಸದೇನಲ್ಲ. ಈ ವ್ಯಕ್ತಿಯ ಬೆದರಿಕೆ ಶೈಲಿಯೂ ಹೊಸದಲ್ಲ. ಇದಕ್ಕೆ ಬಿಜೆಪಿ ಪಕ್ಷವೇ ಉತ್ತರ ನೀಡಬೇಕು. ಇಂಥ ವ್ಯಕ್ತಿಗಳಿಗೆ ಟಿಕೆಟ್ ನೀಡಿದ ಪಕ್ಷವೇ ಜವಾಬ್ದಾರಿಯಾಗಿರಬೇಕು ಎಂದು ಕಟುವಾಗಿ ಟೀಕಿಸಿದರು.
ನಾನು ಕಾನೂನಿನ ಪಾಲನೆ ಮಾಡಬೇಕು ಎಂದು ಹೇಳಿದ್ದೆ. ಅದಕ್ಕೇ ಬೆದರಿಕೆ ಹಾಕುವುದು ಯಾವ ರೀತಿಯ ರಾಜಕೀಯ? ಇಂಥವರಿಗೆ ಏನು ಹೇಳುವುದು? ಎಂದು ಪ್ರಶ್ನಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಪ್ರತಿದಿನವೂ ಹೊಸ ಪುರಾವೆಗಳು ಬೆಳಕಿಗೆ ಬರುತ್ತಿವೆ: ಬೆದರಿಕೆಗಳು ಮುಂದುವರಿದಿವೆ, ಆದರೆ ನಾನು ಭಯಪಡುವುದಿಲ್ಲ. ಅವರು ಫೋನ್ ಕರೆಗಳ ಮೂಲಕ ಬೆದರಿಸಲು ಪ್ರಯತ್ನಿಸಿದ್ದರು. ಆದರೆ ಅದು ವಿಫಲವಾದಾಗ ಅವರ ಧಮಕಿ ಇನ್ನಷ್ಟು ವಿಪರೀತವಾಗುತ್ತದೆ. ನಿನ್ನೆ ಬಿಜೆಪಿ ಚಿತ್ತಾಪುರ ಶಾಸಕ ಅಭ್ಯರ್ಥಿ, ಈಗ ನಿಮಗೆ ಫೋನ್ ಮೂಲಕ ಮಾತ್ರ ಬೆದರಿಕೆ ಹಾಕಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ, RSS ನಿಮ್ಮ ಮನೆಗೆ ನೇರವಾಗಿ ಬರುತ್ತದೆ, RSS ನವರು ಕಟ್ಟರ್ ಪಂಥೀಯರು ಮತ್ತು ದೇಶ ಭಕ್ತರು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಅಶೋಕ ಅವರೇ, ನಿಮ್ಮ ಗೂಂಡಾಗಳು ಪ್ರಯತ್ನ ಮುಂದುವರಿಸಲಿ. ನಾನು ವಾಸವಾಗಿರುವುದು ಎಲ್ಲಿ ಎಂಬುದು ನಿಮಗೂ ತಿಳಿದಿದೆ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
Advertisement