
ಬೆಂಗಳೂರು: ನನಗೆ ನೀಡಲಾಗಿದ್ದ ಬೆಂಗಾವಲು ರಕ್ಷಣೆಯನ್ನು ವಾಪಸ್ ಪಡೆಯಲಾಗಿದೆ. ನನಗೇನಾದರೂ ಆದರೆ, ಅದಕ್ಕೆ ರಾಜ್ಯ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಹೊಣೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮನೆಗೆ 3 ಜನ ಬೆಂಗಾವಲು ರಕ್ಷಕರನ್ನು ನೀಡಿದ್ದರು. ಇದು ನಮಗೆ ಕೊಡಬೇಕಾದ ಭದ್ರತೆ. ಇದೀಗ ಆ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಈ ನಿರ್ಧಾರದ ಹಿಂದೆ ಸರ್ಕಾರ ಹಾಗೂ ಪ್ರಿಯಾಂಕ್ ಖರ್ಗೆ, ಎಲ್ಲರೂ ಇದ್ದಾರೆಂದು ಹೇಳಿದರು.
ಸರಕಾರ ಈ ಕ್ರಮ ಜರುಗಿಸಲು ಕಾರಣವೇನು? ರಾಜ್ಯ ವರ್ಗೀಕೃತ ಭದ್ರತಾ ಪುನರ್ ವಿಮರ್ಶಣಾ ಸಮಿತಿ ಈ ಆದೇಶ ಮಾಡಿದೆ. ನನಗೇನಾದರೂ ಆದರೆ, ಸರಕಾರ ಎಷ್ಟು ಹೊಣೆಯೋ ಪ್ರಿಯಾಂಕ್ ಖರ್ಗೆಯವರ ಕುಟುಂಬವೂ ಅಷ್ಟೇ ಹೊಣೆ ಎಂದು ಎಚ್ಚರಿಸಿದರು.
ನನ್ನ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ವಾಪಸ್ ಪಡೆದು, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ನನ್ನ ಮೇಲೆ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ರಾಜಕಾರಣ ಮಾಡುತ್ತಿದೆ. ಇದು ಸಂಪೂರ್ಣವಾಗಿ ಟಾರ್ಗೆಟ್ ರಾಜಕಾರಣದ ಭಾಗವಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆಯಾಗಿದೆ. ನಾನು ಇಂತಹ ಬೆದರಿಕೆಗಳಿಗೂ, ಒತ್ತಡಗಳಿಗೂ ಹೆದರುವವನಲ್ಲ, ಬೆದರುವವನಲ್ಲ. ಇಂತಹ ಸಂವಿಧಾನ ವಿರೋಧಿ ನಡೆಗಳಿಂದ ನನ್ನ ಛಲ ಯಾವತ್ತೂ ಕುಂದುವುದಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅನ್ಯಾಯ ಮತ್ತು ಜನವಿರೋಧಿ ನೀತಿಗಳ ವಿರುದ್ಧ ನನ್ನ ಹೋರಾಟ ಅಚಲ ಮತ್ತು ನಿರಂತರವಾಗಿರುತ್ತದೆ. ನನ್ನ ಧ್ಯೇಯ – ಜನಹಿತ, ಸಾಮಾಜಿಕ ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ. ನನ್ನನ್ನು ಕಟ್ಟಿಹಾಕಬೇಕೆಂಬ ಕಾಂಗ್ರೆಸ್ ಸರ್ಕಾರದ ಕಸರತ್ತು ಹಗಲುಗನಸಷ್ಟೇ; ಅದು ಯಾವತ್ತೂ ನನಸಾಗುವುದಿಲ್ಲ ಎಂದು ಹೇಳಿದ್ದಾರೆ.
Advertisement