
ಕಲಬುರಗಿ: 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 'ಮತ ಕಳ್ಳತನ'ದ ತನಿಖೆಯನ್ನು ಎಸ್‌ಐಟಿ ತೀವ್ರಗೊಳಿಸಿದ್ದು, ಶನಿವಾರ ಜಿಲ್ಲೆಯ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಅವರ ನಿವಾಸದ ಬಳಿ ಮತದಾರರ ಸುಟ್ಟ ದಾಖಲೆಗಳ ರಾಶಿ ಪತ್ತೆಯಾಗಿದೆ.
ಆಳಂದದ ಹಳ್ಳದ ಬಳಿ ಸುಟ್ಟು ಬಿದ್ದಿರುವ ಹಲವು ದಾಖಲೆಗಳ ಪರಿಶೀಲನೆ ನಡೆಸಿರುವ ಎಸ್ಐಟಿ ಅಧಿಕಾರಿಗಳು, ಸಾಕ್ಷ್ಯ ನಾಶದ ಶಂಕೆ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಸುಭಾಷ್ ಗುತ್ತೆದಾರ್ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಮತದಾರರ ಸುಟ್ಟ ದಾಖಲೆಗಳು ಪತ್ತೆಯಾದ ಬಗ್ಗೆ ಪ್ರತಿಕ್ರಿಯಿಸಿದ ಗುತ್ತೇದಾರ್, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆ ಕ್ಲೀನ್ ಮಾಡುವುದು ವಾಡಿಕೆ. ಅದರಂತೆ ಕೆಲವು ವೇಸ್ಟ್ ಸಾಮಗ್ರಿಗಳನ್ನು, ಹಳೆಯ ನ್ಯೂಸ್ ಪೇಪರ್ ಸೇರಿದಂತೆ ಉಪಯೋಗಕ್ಕೆ ಬಾರದ ಕಾಗದಗಳನ್ನು ಮನೆ ಕೆಲಸದವರು ಸುಟ್ಟಿದ್ದಾರೆ ಎಂದಿದ್ದಾರೆ.
ನಮಗೆ ಏನಾದರೂ ದುರುದ್ದೇಶವಿದ್ದರೆ, ಅದನ್ನು ನಮ್ಮ ಮನೆಯಿಂದ ದೂರ ಸುಟ್ಟುಹಾಕುತ್ತಿದ್ದೇವು. ಯಾರಾದರೂ ಅದನ್ನು ಮನೆಯ ಮುಂದೆ ಏಕೆ ಸುಟ್ಟು ಹಾಕುತ್ತಾರೆ? ಇದರ ಹಿಂದೆ ಯಾವುದೇ ದುರುದ್ದೇಶಗಳಿರಲಿಲ್ಲ'' ಎಂದು ಬಿಜೆಪಿ ಮಾಜಿ ಶಾಸಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನು ಯಾವುದೇ ರೀತಿಯ ಸಾಕ್ಷ ನಾಶಪಡಿಸಲು ಯತ್ನಿಸಿಲ್ಲ. ನನ್ನ ಮನೆಯ ಮೇಲಿನ SIT ದಾಳಿ ರಾಜಕೀಯ ಪ್ರೇರಿತ ಎಂದು ಸುಭಾಷ್ ಗುತ್ತೇದಾರ್ ಆರೋಪಿಸಿದ್ದಾರೆ.
Advertisement