Sudhamurthy  and Narayanamurthy
ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ

ಜಾತಿಸಮೀಕ್ಷೆ: ಸುಧಾಮೂರ್ತಿ-ನಾರಾಯಣಮೂರ್ತಿ ಕುಟುಂಬ ಮಾಹಿತಿ ಬಹಿರಂಗವಾಗಿದ್ದು ಹೇಗೆ?

ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಕುಟುಂಬದವರು ನೀಡಿರುವ ಮಾಹಿತಿ ಹೇಗೆ ಬಹಿರಂಗವಾಯಿತು? ಮಾಹಿತಿ ಸೋರಿಕೆ ಮಾಡಿದ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುತ್ತೀರಾ?
Published on

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ಮಾಹಿತಿಯನ್ನು ಬಹಿರಂಗಪಡಿಸಿದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಜಾತಿಗಣತಿ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ, ಜಾತಿಗಣತಿ ಸಮೀಕ್ಷೆಯಲ್ಲಿ ಸಾರ್ವಜನಿಕರು ನೀಡುವ ಮಾಹಿತಿಯ ಗೌಪ್ಯತೆ ಕಾಪಾಡಬೇಕು. ಈ ಎರಡೂ ಅಂಶಗಳ ಬಗ್ಗೆ ಸ್ವತಃ ಹೈಕೋರ್ಟ್ ಸ್ಪಷ್ಟನೆ ನೀಡಿದ್ದರೂ ಕೂಡ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ವರ್ತಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನ್ಯಾಯಾಂಗ ನಿಂದನೆ ಎಸಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಖ್ಯಾತ ಉದ್ಯಮಿಗಳು ದನಿ ಎತ್ತಿದಾಗ, "ನಿಮ್ಮ ಸಿಎಸ್ಆರ್ ನಿಧಿಯಲ್ಲಿ ನೀವೇ ರಸ್ತೆಗುಂಡಿ ಮುಚ್ಚಿ", "ನಿಮ್ಮ ಸಿಎಸ್ಆರ್ ನಿಧಿಯ ಲೆಕ್ಕಕೊಡಿ" ಎಂದು ಬೆದರಿಸಿ ಅವಮಾನ ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ಒಂದು ಹೆಜ್ಜೆ ಮುಂದೆ ಹೋಗಿ "ಇನ್ಫೋಸಿಸ್ ನವರು ಬೃಹಸ್ಪತಿಗಳಾ?", "ಜಾತಿಗಣತಿ ಸಮೀಕ್ಷೆಯಲ್ಲಿ ಭಾಗವಹಿಸದವರು ದೇಶದ್ರೋಹಿಗಳು" ಎಂದು ನಿಂದಿಸುವ ಮೂಲಕ ಮತ್ತೊಮ್ಮೆ ದರ್ಪ, ದುರಹಂಕಾರ ಮೆರೆದಿದ್ದಾರೆ.

Sudhamurthy  and Narayanamurthy
ನಾವು ಹಿಂದುಳಿದ ಜಾತಿಗೆ ಸೇರಿಲ್ಲ: ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ನಾರಾಯಣಮೂರ್ತಿ- ಸುಧಾಮೂರ್ತಿ ನಿರಾಕರಣೆ!

ಸ್ವಾಮಿ ಸಿಎಂ ಸಿದ್ದರಾಮಯ್ಯ ಅವರೇ, ಸಮೀಕ್ಷೆಯಲ್ಲಿ ಸಾರ್ವಜನಿಕರು ನೀಡುವ ಮಾಹಿತಿಯ ಗೌಪ್ಯತೆಯನ್ನು ಕಾಪಾಡುತ್ತೇವೆ ಎಂದು ನಿಮ್ಮ ಸರ್ಕಾರ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ. ಆದರೂ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಕುಟುಂಬದವರು ನೀಡಿರುವ ಮಾಹಿತಿ ಹೇಗೆ ಬಹಿರಂಗವಾಯಿತು? ಮಾಹಿತಿ ಸೋರಿಕೆ ಮಾಡಿದ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಮಾನ್ಯ ಉಚ್ಚ ನ್ಯಾಯಾಲಯವೇ ಈ ಸಮೀಕ್ಷೆ ಕಡ್ಡಾಯವಲ್ಲ ಅಂತ ಸ್ಪಷ್ಟವಾಗಿ ಹೇಳಿರುವಾಗ ಈ ಸಮೀಕ್ಷೆಯಲ್ಲಿ ಭಾಗವಹಿಸದವರು ದೇಶದ್ರೋಹಿಗಳು ಹೇಗಾಗುತ್ತಾರೆ ಹರಿಪ್ರಸಾದ್ ಅವರೇ? ನಮ್ಮ ನಾಡಿನ, ದೇಶದ ಖ್ಯಾತ ಉದ್ಯಮಿಗಳನ್ನ ನಿಂದಿಸುವ, ಲಕ್ಷಾಂತರ ಜನಕ್ಕೆ ಉದ್ಯೋಗ ಕೊಟ್ಟು ದೇಶದ ಆರ್ಥಿಕತೆಗೆ ಶಕ್ತಿ ತುಂಬಿರುವ ಉದ್ಯಮಿಗಳ ಬಗ್ಗೆ ನಾಲಿಗೆ ಹರಿಬಿಡುವ ಕಾಂಗ್ರೆಸ್ ನಾಯಕರಿಗೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com