ಕಲ್ಲು ಕ್ವಾರಿಯಿಂದ ಮುತ್ತುಗಳವರೆಗೆ: ಪಾಳುಬಿದ್ದ ಸ್ಥಳದಲ್ಲೀಗ ಲಕ್ಷಗಟ್ಟಲೆ ಆದಾಯ ಕಂಡುಕೊಂಡ ಗದಗ ಯುವಕರು!

ನಿರುದ್ಯೋಗಿಗಳಾದ ಮೂವರು, ಸಣ್ಣ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿದರು. ಆದರೆ, ಪಾಳುಬಿದ್ದ ಕ್ವಾರಿಯಲ್ಲಿ ಕುಳಿತು ವಿಭಿನ್ನ ಆಲೋಚನೆ ಮಾಡಿದ್ದರು.
The trio converted an abandoned stone quarry at their village Hatalageri in Gadag into a pearl farm
ಗದಗದ ಹಾತಲಗೇರಿ ಗ್ರಾಮದಲ್ಲಿರುವ ಪಾಳುಬಿದ್ದ ಕಲ್ಲಿನ ಕ್ವಾರಿಯಲ್ಲಿ ಪರ್ಲ್ ಕೃಷಿಯಲ್ಲಿ ತೊಡಗಿದ ಮೂವರು.
Updated on

ಹಾತಲಗೇರಿ (ಗದಗ): ಗದಗ ಜಿಲ್ಲೆಯ ಹಾತಲಗೇರಿಯ ಮೂವರು ಯುವಕರು ತಮ್ಮ ಹಳ್ಳಿಯಲ್ಲಿದ್ದ ಪಾಳುಬಿದ್ದ ಕಲ್ಲು ಕ್ವಾರಿಯೊಂದನ್ನು ಮುತ್ತುಗಳ ಫಾರ್ಮ್ ಆಗಿ ಪರಿವರ್ತಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂಬಿಎ ಪದವೀಧರರಾದ ಪ್ರಿನ್ಸ್ ವೀರ್, ಕೃಷ್ಣ ಜಾಲಮ್ಮನವರ್ ಮತ್ತು ವೀರೇಶ್ ಹಿರೇಮಠ್ 2020ರಲ್ಲಿ ಕೋವಿಡ್‌ನಿಂದಾಗಿ ಮನೆಗೆ ಮರಳಬೇಕಾಯಿತು. ಆದರೆ, ಇದುವೇ ತಮಗೆ ವರದಾನವಾಗುತ್ತದೆ ಎಂದು ಅವರು ಎಂದಿಗೂ ಊಹಿಸಿರಲಿಲ್ಲ.

ನಿರುದ್ಯೋಗಿಗಳಾದ ಮೂವರು, ಸಣ್ಣ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿದರು. ಆದರೆ, ಪಾಳುಬಿದ್ದ ಕ್ವಾರಿಯಲ್ಲಿ ಕುಳಿತು ವಿಭಿನ್ನ ಆಲೋಚನೆ ಮಾಡಿದ್ದರು. ನೀರಿನಿಂದ ತುಂಬಿದ್ದ ಅದೇ ಕ್ವಾರಿಯಲ್ಲಿ, ಅವರು ಪರ್ಲ್ ಕೃಷಿ ಮಾಡುವ ಯೋಜನೆ ರೂಪಿಸಿದರು.

ಅವರ ಕುಟುಂಬಗಳು ಮತ್ತು ಸ್ನೇಹಿತರ ವಿರೋಧದ ಹೊರತಾಗಿಯೂ, ಅವರು ವ್ಯವಹಾರದಲ್ಲಿ ತೊಡಗಿಕೊಂಡರು. 2021ರಲ್ಲಿ, ಅವರು 6 ಲಕ್ಷ ರೂ. ಹೂಡಿಕೆ ಮಾಡಿ 15 ಲಕ್ಷ ರೂ. ಗಳಿಸಿದರು. ಕಳೆದ ವರ್ಷ, ಅವರು 40 ಲಕ್ಷ ರೂ. ಹೂಡಿಕೆ ಮಾಡಿ 70 ಲಕ್ಷ ರೂ. ಗಳಿಸಿದರು. ಅವರ ಯಶಸ್ಸನ್ನು ನೋಡಿ, ಗದಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ 23 ಯುವಕರು ಅವರೊಂದಿಗೆ ಸೇರಿಕೊಂಡರು. 18 ವರ್ಷಗಳ ಹಿಂದೆ ಕ್ವಾರಿ ಮಳೆಯಿಂದ ತುಂಬಿದಾಗ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಲಾಯಿತು. ಅಂದಿನಿಂದ 55 ಅಡಿ ಆಳದ ಕ್ವಾರಿ ನೀರಿನಿಂದ ತುಂಬಿದೆ. ಕ್ವಾರಿ ನೀರಿನಲ್ಲಿರುವ ಸಮೃದ್ಧ ಖನಿಜಗಳು ಆಸ್ಟರ್ ಮಸ್ಸೆಲ್ಸ್ (oyster mussels) ವೇಗವಾಗಿ ಬೆಳೆಯಲು ಸಹಾಯ ಮಾಡುತ್ತವೆ.

ಇಳುವರಿಯೊಂದಿಗೆ ಮೂವರು ಯುವಕರು
ಇಳುವರಿಯೊಂದಿಗೆ ಮೂವರು ಯುವಕರು

ನಟ ಮತ್ತು ನಿರೂಪಕರಾಗಿದ್ದ ವೀರ್, ಪದವಿ ಪಡೆದ ನಂತರ ಬೆಂಗಳೂರಿಗೆ ಹೋದರು ಮತ್ತು 15 ಕನ್ನಡ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದರು. ಅವರು ದೂರದರ್ಶನದಲ್ಲೂ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದರು. ಆದರೆ ಸಾಂಕ್ರಾಮಿಕ ರೋಗವು ನಟನಾ ವೃತ್ತಿಯನ್ನು ಮುಂದುವರಿಸುವ ಅವರ ಎಲ್ಲ ಭರವಸೆಗಳು ಮತ್ತು ಕನಸುಗಳನ್ನು ಹಾಳು ಮಾಡಿತು. ಸತತ ಲಾಕ್‌ಡೌನ್‌ಗಳನ್ನು ಘೋಷಿಸಿದಾಗ, ಅವರು ಮನೆಗೆ ಮರಳಿದರು. ಅವರ ಸ್ನೇಹಿತರಾದ ಕೃಷ್ಣ ಮತ್ತು ವೀರೇಶ್ ಆ ಹೊತ್ತಿಗಾಗಲೇ ಹಳ್ಳಿಗೆ ಮರಳಿದ್ದರು.

'ದಕ್ಷಿಣ ಭಾರತಕ್ಕೆ ಪರ್ಲ್ ಕೃಷಿ ಹೊಸದು. ನೈಸರ್ಗಿಕ ಕಾರಣಗಳಿಗಾಗಿ ಇದು ಪಶ್ಚಿಮ ಬಂಗಾಳದಲ್ಲಿ ಜನಪ್ರಿಯವಾಗಿದೆ. ನಮ್ಮ ಹಳ್ಳಿಯಲ್ಲಿದ್ದ ಪಾಳುಬಿದ್ದ ಕ್ವಾರಿ ಮುತ್ತು ಕೃಷಿಗೆ ಸೂಕ್ತವಾಗಿದೆ ಎಂದು ತಿಳಿದ ನಂತರ, ನಾವು ನಮ್ಮ ಉದ್ಯಮವನ್ನು ಪ್ರಾರಂಭಿಸಿದೆವು. ಕ್ವಾರಿ ಭೂಮಿಯನ್ನು ಅದರ ಮಾಲೀಕರಿಂದ ವರ್ಷಕ್ಕೆ 1 ಲಕ್ಷ ರೂ.ಗಳಿಗೆ ಬಾಡಿಗೆಗೆ ಪಡೆದಿದ್ದೇವೆ' ಎಂದು ವೀರ್ ಹೇಳಿದರು.

ಈ ಮೂವರು ಪಶ್ಚಿಮ ಬಂಗಾಳದಲ್ಲಿರುವ ಪರ್ಲ್ ಕೃಷಿ ಕಂಪನಿಯನ್ನು ಸಂಪರ್ಕಿಸಿದರು. ಅದು ಅವರಿಗೆ ಮಸ್ಸೆಲ್‌ಗಳನ್ನು ಪೂರೈಸುವುದಾಗಿ ಮತ್ತು ನಂತರ ಮುತ್ತುಗಳನ್ನು ಖರೀದಿಸುವುದಾಗಿ ಭರವಸೆ ನೀಡಿತು. 2021ರಲ್ಲಿ, ಅವರು 6 ಲಕ್ಷ ರೂ. (ತಲಾ 2 ಲಕ್ಷ ರೂ.) ಹೂಡಿಕೆ ಮಾಡಿ 18,000 ಮಸ್ಸೆಲ್‌ಗಳನ್ನು ತಂದರು. ಕಂಪನಿಯ ತಜ್ಞರು ಹಾತಲಗೇರಿಗೆ ಬಂದು ಇಂಪ್ಲಾಂಟಿಂಗ್ ತಂತ್ರಗಳು ಸೇರಿದಂತೆ ಮುತ್ತು ಕೃಷಿಯ ಸೂಕ್ಷ್ಮ ವ್ಯತ್ಯಾಸಗಳನ್ನು ಅವರಿಗೆ ಕಲಿಸಿದರು. ಎರಡು ವರ್ಷಗಳ ಹೋರಾಟದ ನಂತರ, ಅವರು 15 ಲಕ್ಷ ರೂ.ಗಳನ್ನು ಗಳಿಸಿದರು.

ಅವರ ಉದ್ಯಮ ಜನಪ್ರಿಯವಾಗುತ್ತಿದ್ದಂತೆ, ಕೆಲವು ಸ್ಥಳೀಯರು 40 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರು. ಈ ಮೂವರು ಎರಡನೇ ಸುಗ್ಗಿಯಿಂದ 70 ಲಕ್ಷ ರೂ.ಗಳನ್ನು ಗಳಿಸಿದರು. ಕೆಲವು ತಿಂಗಳ ಹಿಂದೆ ಇನ್ನೂ ಇಪ್ಪತ್ತಮೂರು ಹೂಡಿಕೆದಾರರು ಅವರೊಂದಿಗೆ ಸೇರಿಕೊಂಡರು. ಈ ವರ್ಷ, ಅವರು 75 ಲಕ್ಷ ರೂ. ಮೌಲ್ಯದ 1.30 ಲಕ್ಷ ಸಿಂಪಿ ಮಸ್ಸೆಲ್‌ಗಳನ್ನು ತಮ್ಮ 'ಕ್ವಾರಿಯಲ್ಲಿ' ಬಿತ್ತಿದ್ದಾರೆ ಮತ್ತು 1.50 ಕೋಟಿ ರೂ.ಗಳ ನಿರೀಕ್ಷೆಯಲ್ಲಿದ್ದಾರೆ.

ಕೃಷ್ಣ ಜಾಲಮ್ಮನವರ್ ಮಾತನಾಡಿ, 'ನಾವು ಒಂದು ಮಸ್ಸೆಲ್‌ಗೆ 60 ರೂ.ಗಳನ್ನು ಖರ್ಚು ಮಾಡುತ್ತೇವೆ ಮತ್ತು ಕಂಪನಿಯು ಅದನ್ನು 230 ರೂ.ಗಳಿಗೆ ಮರಳಿ ಖರೀದಿಸುತ್ತದೆ. ಆದಾಗ್ಯೂ, ನಾವು ಯಾವಾಗಲೂ ಲಾಭವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರೋಗಗಳು ಮಸ್ಸೆಲ್‌ಗಳ ಮೇಲೆ ಪರಿಣಾಮ ಬೀರಿದರೆ, ನಷ್ಟ ಉಂಟಾಗುವ ಅಪಾಯವಿದೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com