
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು, 'ಸನಾತನ ಸಂಸ್ಥೆಗಳ ಸಹವಾಹ ಬಿಡಿ' ಎಂಬ ಹೇಳಿಕೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಈ ಬಗ್ಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, 'ನಾನು ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನೀವು ನನ್ನ ಕಡೆಯಿಂದ ಏನು ಬೇಕಾದರೂ ಕೇಳಬಹುದು. ನಾನು ನಿಮಗೆ ವಿವರಿಸುತ್ತೇನೆ' ಎಂದು ಹೇಳಿದರು.
ಶನಿವಾರದಂದು, ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಡಾ. ಬಿಆರ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುತ್ತದೆ ಎಂದು ಆರೋಪಿಸಿದರು.
ಮೈಸೂರು ವಿಶ್ವವಿದ್ಯಾಲಯದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡವನ್ನು ಉದ್ಘಾಟಿಸಿ ಮಾಡಿದ ಭಾಷಣದ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು, 'ಅಂಬೇಡ್ಕರ್ ಅವರ ಸಂವಿಧಾನವನ್ನು ಮನುವಾದಿಗಳು ಹಿಂದೆಯೂ ವಿರೋಧಿಸಿದ್ದರು, ಈಗಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು' ಎಂದಿದ್ದಾರೆ.
'ನಾನು ಬುದ್ದ, ಬಸವ, ಅಂಬೇಡ್ಕರ್ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಈ ಕಾರಣಕ್ಕೆ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯಬೇಕು ಎಂದು ಆಶಿಸುತ್ತೇನೆ. ವಿಜ್ಞಾನ ಓದಿಯೂ ಮೂಢ ನಂಬಿಕೆ ಆಚರಿಸುವವರಾಗಬೇಡಿ. ಸಮಾಜಕ್ಕಾಗಿ ನಿಲ್ಲುವವರ ಜೊತೆ ಬೆರೆಯಿರಿ. ಸಾಮಾಜಿಕ ಬದಲಾವಣೆಯನ್ನು ವಿರೋಧಿಸುವವರೊಂದಿಗೆ ಅಥವಾ ಸನಾತನ ಸಂಸ್ಥೆಗಳೊಂದಿಗೆ ಸಹವಾಸ ಮಾಡಬೇಡಿ' ಎಂದು ಅವರು ಬರೆದಿದ್ದಾರೆ.
ಬಿಜೆಪಿ ಮತ್ತು ಸಂಘವು ಅಂಬೇಡ್ಕರ್ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಬಿಜೆಪಿ ಮತ್ತು ಸಂಘ ಪರಿವಾರ ಅಂಬೇಡ್ಕರ್ ಅವರ ಹೆಸರಿನಲ್ಲಿ ಸುಳ್ಳು ಪ್ರಚಾರವನ್ನು ಹರಡುತ್ತಿದೆ ಎಂದು ಆರೋಪಿಸಿದ ಅವರು, "ಕಾಂಗ್ರೆಸ್ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿತು ಎಂದು ಅವರು ಸುಳ್ಳುಗಳನ್ನು ಹರಡುತ್ತಿದ್ದಾರೆ. ಆದರೆ, ಸಾವರ್ಕರ್ ಮತ್ತು ಡಾಂಗೆ ನನ್ನನ್ನು ಸೋಲಿಸಿದರು ಎಂದು ಅಂಬೇಡ್ಕರ್ ಸ್ವತಃ ತಮ್ಮ ಕೈಬರಹದಲ್ಲಿ ಬರೆದಿದ್ದಾರೆ. ಸಂಘ ಪರಿವಾರದ ಸುಳ್ಳುಗಳನ್ನು ಬಹಿರಂಗಪಡಿಸಲು ಇಂತಹ ಸತ್ಯಗಳನ್ನು ಸಮಾಜದ ಮುಂದೆ ಇಡಬೇಕು" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Advertisement