ಈ ಬಾರಿಯ ಮುಂಗಾರು ಅವಧಿಯಲ್ಲಿಅತಿವೃಷ್ಟಿಯಿಂದ ತತ್ತರಿಸಿದ ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಪ್ರವಾಹ ಪರಿಹಾರ ನಿಧಿಯ ಎರಡನೇ ಕಂತು ಬಿಡುಗಡೆ ಮಾಡಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ಎರಡೂ ರಾಜ್ಯಗಳಿಗೆ 2025-26ನೇ ಸಾಲಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯ ಕೇಂದ್ರದ ಪಾಲಿನ ಎರಡನೇ ಕಂತಿನ ಭಾಗವಾಗಿ 1,950.80 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಈ ಹಣದಲ್ಲಿ ಕರ್ನಾಟಕಕ್ಕೆ 384.40 ಕೋಟಿ ರೂ. ಬಿಡುಗಡೆಯಾಗಲಿದ್ದರೆ, ಮಹಾರಾಷ್ಟ್ರಕ್ಕೆ 1,566.40 ಕೋಟಿ ರೂ. ದೊರೆಯಲಿದೆ. ಮುಂಗಾರು ಅವಧಿಯಲ್ಲಿ ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿಯಾಗಿತ್ತು. ಕೆಲವು ವಾರಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು.
ಪ್ರತಿಷ್ಠಿತ ಓಲಾ ಕಂಪನಿಗೆ ಸಂಕಷ್ಟ ಎದುರಾಗಿದ್ದು, ಸಂಸ್ಥೆಯ ಎಂಜಿನಿಯರ್ ಒಬ್ಬರು, ವೇತನ ಪಾವತಿಸದೇ ಕಿರುಕುಳ' ನೀಡಲಾಗುತ್ತಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಓಲಾ ಸಂಸ್ಥೆಯ ಹೋಮೋಲೋಗೇಷನ್ ವಿಭಾಗದ ಅರವಿಂದ್ ಕೆ ಬೆಂಗಳೂರಿನ ಚಿಕ್ಕಲಸಂದ್ರದಲ್ಲಿರುವ ಮಂಜುನಾಥನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸೆ.28 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಅರವಿಂದ್ ಸಾವಿಗೆ ಸಂಸ್ಥೆಯ ಕಿರುಕುಳವೇ ಕಾರಣ ಎಂದು ಹೇಳಲಾಗಿದೆ.
ಅರವಿಂದ್ ಆತ್ಮಹತ್ಯೆ ಮಾಡಿಕೊಂಡ ಎರಡು ದಿನದ ಬಳಿಕ ಅರವಿಂದ್ ಬ್ಯಾಂಕ್ ಅಕೌಂಟ್ ಗೆ 17.46 ಲಕ್ಷ ರೂ. ಹಣ ಜಮೆಯಾಗಿತ್ತು. ಹಣ ಜಮೆಯಾದ ಬಗ್ಗೆ ಅನುಮಾನದಿಂದ ಕಂಪನಿಯವರನ್ನ ಕುಟುಂಬಸ್ಥರು ಪ್ರಶ್ನಿಸಿದ್ದರು. ಅನುಮಾನ ಹೆಚ್ಚಾದ ನಂತರ ಮನೆಯನ್ನು ಪರಿಶೀಲಿಸಿದಾಗ 28 ಪುಟಗಳ ಡೆತ್ ನೋಟ್ ಪತ್ತೆಯಾಗಿತ್ತು. ಅರವಿಂದ್ ಡೆತ್ ನೋಟ್ ನಲ್ಲಿ ಸಂಸ್ಥೆಯಲ್ಲಿನ ಕಿರುಕುಳದ ಕುರಿತು ಆರೋಪಿಸಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮತ್ತೆ ವಿಸ್ತರಿಸಲಾಗಿದ್ದು, ರಾಜ್ಯಾದ್ಯಂತ ಅಕ್ಟೋಬರ್ 31 ರವರೆಗೆ ಸಮೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆ ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಾಗಿತ್ತು. ಅದನ್ನು ಅಕ್ಟೋಬರ್ 19 ರವರೆಗೆ ವಿಸ್ತರಿಸಲಾಯಿತು. ಇದೀಗ ಮತ್ತೆ ವಿಸ್ತರಿಸಲಾಗಿದೆ.ರಾಜ್ಯದಾದ್ಯಂತ ಸುಮಾರು 1.43 ಕೋಟಿ ಕುಟುಂಬಗಳಲ್ಲಿ 5.42 ಕೋಟಿ ಜನರ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ರಾಜ್ಯ ಸರ್ಕಾರ ದೀಪಾವಳಿಯ ನಿಮಿತ್ತ ಅಕ್ಟೋಬರ್ 20 ರಿಂದ ಅಕ್ಟೋಬರ್ 22 ರವರೆಗೆ ಸಮೀಕ್ಷೆಯಲ್ಲಿ ಭಾಗವಹಿಸುವ ಎಲ್ಲರಿಗೂ ರಜಾದಿನಗಳನ್ನು ಘೋಷಿಸಿದೆ.ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಶೋಕ ಜನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ. "ಕೆಲವರು ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೇ ಕೋಮು ಸೌಹಾರ್ದತೆ ಕದಡುತ್ತಿದ್ದಾರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸುಳ್ಳು ಹೇಳಿದ್ರೆ ಕಾನೂನು ತಂದು ಕೇಸ್ ಹಾಕ್ತೀವಿ. ಪ್ರಿಯಾಂಕ್ ಖರ್ಗೆ ಮತ್ತು ಹೆಚ್.ಕೆ ಪಾಟೀಲ್ ಆ ಕೆಲಸದಲ್ಲಿ ತೊಡಗಿದ್ದಾರೆ' ಎಂದು ಹೇಳಿದ್ದಾರೆ. ಸಮಾರಂಭದ ಭಾಗವಾಗಿದ್ದ ವಸ್ತ್ರದಾನ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಸಂಭವಿಸಿ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆಯೂ ವರದಿಯಾಗಿದೆ.
ಜಾರಕಿಹೊಳಿ ಹಾಗೂ ರಮೇಶ ಕತ್ತಿ ಬಣದ ನಡುವಿನ ಜಿದ್ದಾಜಿದ್ದಿಯ ಕಣವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆಯ ಫಲಿತಾಂಶ ಭಾನುವಾರ ಹೊರಬಿದ್ದಿದೆ. 16 ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಬ್ಯಾಂಕಿನ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಜಾರಕಿಹೊಳಿ ಬಣ ಯಶಸ್ವಿಯಾಗಿದೆ. ಡಿಸಿಸಿ ಬ್ಯಾಂಕ್ ಒಟ್ಟು 16 ನಿರ್ದೇಶಕರ ಬಲ ಹೊಂದಿದೆ. ಈ ಪೈಕಿ ಈಗಾಗಲೇ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಈ ಪೈಕಿ ಇಬ್ಬರು ನಿರ್ದೇಶಕರು ತಟಸ್ಥ ನಿಲುವು ಹೊಂದಿದ್ದರೆ, ಉಳಿದ 7 ನಿರ್ದೇಶಕರು ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದರು. ಭಾನುವಾರ 7 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆದರೆ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ ಮತ್ತು ಹುಕ್ಕೇರಿ ಕ್ಷೇತ್ರಗಳ ಫಲಿತಾಂಶವನ್ನು ಕಾಯ್ದಿರಿಸಲಾಗಿದೆ.
Advertisement