
ಬೆಳಗಾವಿ: ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಚೈನೀಸ್ ಮಾಂಜಾ ದಾರ ಬಳಕೆ, ಮಾರಾಟ ಮುಂದುವರೆದಿದೆ. ಇದಕ್ಕೆ ಉದಾಹಣೆ ಎಂಬಂತೆ ಬೆಳಗಾವಿಯಲ್ಲಿ ಘಟನೆಯೊಂದು ನಡೆದಿದೆ. ಚೈನೀಸ್ ಮಾಂಜಾದಾರದಿಂದ ಮೂರು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ದ್ವಿಚಕ್ರ ವಾಹನದಲ್ಲಿ ತನ್ನ ಪೋಷಕರೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದ ಮಗುವಿಗೆ ಚೈನೀಸ್ ಮಾಂಜಾ ದಾರದಿಂದ ಕುತ್ತಿಗೆಗೆ ಆಳವಾದ ಗಾಯಗಳಾಗಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ವಡ್ಗಾಂವ್ ನಿವಾಸಿಯಾದ ಬಾಲಕಿ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ತನ್ನ ಪೋಷಕರೊಂದಿಗೆ ಶಹಾಪುರಕ್ಕೆ ಪ್ರಯಾಣಿಸುತ್ತಿದ್ದಳು. ಶಹಾಪುರ ಪೊಲೀಸ್ ಠಾಣೆಯ ಹಿಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಗಾಳಿಪಟದ ದಾರ ಮಗುವಿನ ಕುತ್ತಿಗೆ ಸೀಳಿದೆ. ಪೋಷಕರು ತಕ್ಷಣ ಬಾಲಕಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಚೈನೀಸ್ ಮಾಂಜಾ ದಾರ ಮಾರಾಟ ಮತ್ತು ಬಳಕೆಯ ಮೇಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಷೇಧ ಹೇರಿದೆ. ಆದರೂ, ದಾರವನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ, ಇದೇ ರೀತಿಯ ಘಟನೆಗಳಲ್ಲಿ ಕನಿಷ್ಠ ಮೂರರಿಂದ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವಾರವಷ್ಟೇ, ಕೇಂದ್ರ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನ ಸವಾರನೊಬ್ಬ ಮಾಂಜಾ ದಾರದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ.
Advertisement