
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಪ್ರಿಯಾಂಕ್ ಖರ್ಗೆಯವರು ಯತ್ನಿಸುತ್ತಿದ್ದಾರೆಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಅವರು ಸೋಮವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಜೂನಿಯರ್ ಖರ್ಗೆ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕದಲ್ಲಿ ಸಾಕಷ್ಟು ಗದ್ದಲ ಎಬ್ಬಿಸುತ್ತಿದ್ದಾರೆ. ಅವರು ಪ್ರತಿದಿನ ಆರ್.ಎಸ್.ಎಸ್ ಬಗ್ಗೆ ಪತ್ರಗಳನ್ನು ಬರೆಯುತ್ತಾ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಅವರು ಈ ಎಲ್ಲವನ್ನು ಮಾಡಲು ಪ್ರಾರಂಭಿಸಿದ್ದರ ಹಿಂದೆ ದೊಡ್ಡ ಕಾರಣವೇ ಇರಬೇಕು ಎಂದು ಹೇಳಿದ್ದಾರೆ.
ಕರ್ನಾಟಕದ ರಾಜಕೀಯ ವಲಯದಲ್ಲಿ ಅಧಿಕಾರ ಹಸ್ತಾಂತರ ಕುರಿತಂತೆ ಮಾತುಗಳು ಜೋರಾಗಿ ಕೇಳಿ ಬರುತ್ತಿರುವಾಗ, ಖರ್ಗೆ ಜೂನಿಯರ್ ಹೆಚ್ಚುವರಿ ಸೈದ್ಧಾಂತಿಕತೆಯನ್ನು ಪ್ರದರ್ಶಿಸುತ್ತಿದ್ದು, ಅವರ ತಂದೆ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗಿಂತಲೂ ಹೆಚ್ಚು ಸೈದ್ಧಾಂತಿಕರಾಗಿ ಕಾಣಲು ಪ್ರಾರಂಭಿಸಿದ್ದಾರೆ. ಶ್ರೀ ರಾಹುಲ್ ಗಾಂಧಿ ಅವರಿಗೆ ಏನು ಇಷ್ಟವಾಗುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಯಾವ ಬದಿಯಲ್ಲಿ ಬ್ರೆಡ್ ಗೆ ಬೆಣ್ಣೆ ಹಚ್ಚಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡಿದ್ದಾರೆ. ಅಧಿಕಾರಕ್ಕಾಗಿ ಪೈಪೋಟಿ ನಡೆದಿರುವಾಗ, ಅವರ ತಂದೆಯವರನ್ನು ಹೊರತುಪಡಿಸಿದ, ಕಾಂಗ್ರೆಸ್ಸಿನ ನಿಜವಾದ ಹೈಕಮಾಂಡ್ ಅನ್ನು ಮೆಚ್ಚಿಸಬೇಕೆಂದರೆ, ಆರ್.ಎಸ್.ಎಸ್ ಅನ್ನು ಬಲವಾಗಿ ಟೀಕಿಸುವುದೇ ಉತ್ತಮ ಮಾರ್ಗ ಎಂದು ಅವರು ತಿಳಿದಂತೆ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ಆರ್.ಎಸ್.ಎಸ್ ವಿರುದ್ಧ ವಾಗ್ಧಾಳಿ ನಡೆಸುವ ಮೂಲಕ, ಖರ್ಗೆ ಜೂನಿಯರ್ ಅವರು ಶ್ರೀ ರಾಹುಲ್ ಗಾಂಧಿಯವರ ಚಿಂತನೆ ಮತ್ತು ಆಲೋಚನಾ ಪ್ರಕ್ರಿಯೆಗಳಿಗೆ ಬಹಳ ಹತ್ತಿರವಿದ್ದಂತೆ ಕಾಣುತ್ತಿದ್ದಾರೆ. ಶ್ರೀ ಸಿದ್ದರಾಮಯ್ಯ, ಶ್ರೀ ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್, ಶ್ರೀ ಎಚ್.ಕೆ.ಪಾಟೀಲ್ ಮತ್ತು ಶ್ರೀ ಕೃಷ್ಣಬೈರೇಗೌಡ ಸೇರಿದಂತೆ ಕರ್ನಾಟಕದ ಇತರ ಯಾವುದೇ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚು ನಿಷ್ಠರಾಗಿ ಅವರು ಹೊರಹೊಮ್ಮಿದ್ದಾರೆ.
ಖರ್ಗೆ ಜೂನಿಯರ್ ಅವರ ಉತ್ಸಾಹ, ಅವರ ಹೆಚ್ಚುವರಿ ಸೈದ್ಧಾಂತಿಕ ನಿಷ್ಠೆಯನ್ನು ಗಮನಿಸಿ, ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಉತ್ತಮ ಪ್ರತಿಫಲ ನೀಡಲಿದ್ದು, ಶ್ರೀ ಸಿದ್ದರಾಮಯ್ಯನವರು ಸದ್ಯೋಭವಿಷ್ಯದಲ್ಲಿ (ನವೆಂಬರ್?) ಕೆಳಗೆ ಇಳಿದ ನಂತರ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ಏನಾದರಾಗಲಿ, ಕರ್ನಾಟಕ ರಾಜಕೀಯದಲ್ಲಿ ಸುದೀರ್ಘ ಕಾಲದಿಂದ ಇದ್ದರೂ ಖರ್ಗೆ ಸೀನಿಯರ್ ಅವರಿಗೆ ಕುರ್ಚಿ ಸಿಕಿಲ್ಲ. ಕನಿಷ್ಠ, ಅವರ ಮಗನಿಗಾದರೂ ನಷ್ಟ ಪರಿಹಾರ ನೀಡಬೇಕು. ಕಾಂಗ್ರೆಸ್‌ನಂತಹ ವಂಶರಾಜಕಾರಣದ ಪಕ್ಷದಲ್ಲಿ ಅದು ಬಹಳ ಸೂಕ್ತ ನಿರೀಕ್ಷೆಯೂ ಆಗಿದೆ. ಅಲ್ಲದೆ, ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದರೆ, ಕನಿಷ್ಠ ಉಪಮುಖ್ಯಮಂತ್ರಿಯಾದರೂ ಆಗಬಹುದು ಎನ್ನುವುದು ಖರ್ಗೆ ಜೂನಿಯರ್ ಅವರಿಗೆ ತಿಳಿದಿದೆ ಎಂದು ಹೇಳಿದ್ದಾರೆ.
Advertisement