News Headlines 21-10-25 | GST ಹೆಸರಲ್ಲಿ ಸುಲಿಗೆ: ಕರ್ನಾಟಕಕ್ಕೆ 15 ಕೋಟಿ ರೂ ನಷ್ಟ: BJP ಹೈಕಮಾಂಡ್ ಗೆ 1800 ಕೋಟಿ ರೂ ಕಪ್ಪ ಕೊಟ್ಟಿದ್ದು ಮರೆತೋಯ್ತಾ; ಯುವತಿಗೆ ಕಿರುಕುಳ: ವೈದ್ಯನ ಬಂಧನ!

News Headlines 21-10-25 | GST ಹೆಸರಲ್ಲಿ ಸುಲಿಗೆ: ಕರ್ನಾಟಕಕ್ಕೆ 15 ಕೋಟಿ ರೂ ನಷ್ಟ: BJP ಹೈಕಮಾಂಡ್ ಗೆ 1800 ಕೋಟಿ ರೂ ಕಪ್ಪ ಕೊಟ್ಟಿದ್ದು ಮರೆತೋಯ್ತಾ; ಯುವತಿಗೆ ಕಿರುಕುಳ: ವೈದ್ಯನ ಬಂಧನ!

1. GST ಹೆಸರಲ್ಲಿ ಕೇಂದ್ರದಿಂದ ಸುಲಿಗೆ: ಕರ್ನಾಟಕಕ್ಕೆ 15 ಕೋಟಿ ನಷ್ಟ: ಸಿದ್ದು

ಬೆಂಗಳೂರಿನ ಮೆಟ್ರೊಗೆ ಶೇ 87ರಷ್ಟು ಹಣ ಕೊಡುವುದು ರಾಜ್ಯ ಸರ್ಕಾರ. ಅಂದರೆ ರಾಜ್ಯದ ಜನತೆಯ ಶೇ 87ರಷ್ಟು ಹಣದಲ್ಲಿ ಮೆಟ್ರೊ ಆಗಿದೆ. ಆದರೆ ಬಿಜೆಪಿಯವರು ಮೆಟ್ರೊ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗಾಂಧಿ ನಗರ ಕ್ಷೇತ್ರದ ಚಿಕ್ಕಪೇಟೆಯಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇನ್ನು ಒಂದು ವಾರದಲ್ಲಿ ಬೆಂಗಳೂರಿನ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, GST ಹೆಸರಲ್ಲಿ ಕೇಂದ್ರ ಸರ್ಕಾರ ಭಾರತೀಯರ ಹಣವನ್ನು ಸುಲಿಗೆ ಮಾಡಿದೆ ಎಂದು ಆರೋಪಿಸಿದರು. ಎಂಟು ವರ್ಷ ಸುಲಿಗೆ ಮಾಡಿ ಈಗ ಮೋದಿ ಫೋಟೋ ಹಾಕಿ ದೀಪಾವಳಿ ಗಿಫ್ಟ್ ಎಂದು ನಾಚಿಕೆ ಇಲ್ಲದೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಜಿಎಸ್‌ಟಿ ಬದಲಾವಣೆಯಿಂದ ರಾಜ್ಯಕ್ಕೆ 15 ಸಾವಿರ ಕೋಟಿ ನಷ್ಟವಾಗಿದೆ. ಇನ್ನು ಬೆಂಗಳೂರಿನ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್ ಶೋಭಾ ಕರಂದ್ಲಾಜೆ ಅವರು ಕರ್ನಾಟಕಕ್ಕೆ ಕೊಡಬೇಕಾದ ದುಡ್ಡನ್ನು ಕೇಂದ್ರ ಸರ್ಕಾರದ ಬಳಿ ಕೇಳಿ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿದ್ದರಾಮಯ್ಯ ಗುಡುಗಿದರು.

2. BJP ಹೈಕಮಾಂಡ್ ಗೆ 1800 ಕೋಟಿ ಕಪ್ಪ ಕೊಟ್ಟಿದ್ದು ಮರೆತೋಯ್ತಾ

ಬಿಜೆಪಿ ಹೈಕಮಾಂಡ್ಗೆ 1800 ಕೋಟಿ ರೂಪಾಯಿ ಕಪ್ಪ ನೀಡಿದ್ದನ್ನು ಮರೆತಿದ್ದೀರಾ..? ಎಂದು ರಾಜ್ಯ ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ. ಬಿಜೆಪಿ ಹೈಕಮಾಂಡಿಗೆ 1800 ಕೋಟಿ ಕಪ್ಪ ನೀಡಿದ್ದನ್ನು ಯಡಿಯೂರಪ್ಪ ಹಾಗೂ ದಿ. ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು ಬಿಜೆಪಿ ನಾಯಕರು ಮರೆತಿದ್ದಾರಾ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ಹಾಗೂ ಮಂತ್ರಿ ಸ್ಥಾನಕ್ಕೆ 60, 70 ಕೋಟಿ ಕೊಡಬೇಕು ಎಂದು ಹೇಳಿದ್ದವರೂ ಬಿಜೆಪಿಯವರೇ. ಬಿಜೆಪಿ ಹೈಕಮಾಂಡ್ ಹುದ್ದೆಗಳನ್ನು ಮಾರಾಟಕ್ಕಿಟ್ಟು ವ್ಯಾಪಾರಕ್ಕೆ ಕುಳಿತಿತ್ತು ಎನ್ನುವುದನ್ನು ಬಿಜೆಪಿಯವರೇ ಬಹಿರಂಗಪಡಿಸಿದ್ದರು ಖರ್ಗೆ ಹೇಳಿದ್ದಾರೆ. ಇನ್ನು ಬಿಹಾರ ಚುನಾವಣೆಗೆ ಹಣ ಕಳುಹಿಸಲು ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾರ್ಗೆಟ್‌ ನೀಡಿದ್ದು, ಸೂಟ್‌ಕೇಸ್ ತುಂಬಿಸುವ ಕೆಲಸ ನಡೆದಿದೆ ಎಂದು ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದರು.

3. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭೇಟಿಯಾದ ಕಿರಣ್ ಮಜುಂದಾರ್ ಶಾ

ಬೆಂಗಳೂರಿನ ಹದಗೆಟ್ಟ ರಸ್ತೆಗುಂಡಿ, ಕಸದ ವಿಲೇವಾರಿ ಸಮಸ್ಯೆ, ಮೂಲಭೂತ ಸೌಕರ್ಯ ಕೊರತೆ ಬಗ್ಗೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಇತ್ತೀಚೆಗೆ ರಾಜ್ಯ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕೆಲವು ಸಚಿವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಕಿರಣ್ ಮಜುಂದಾರ್ ಶಾ ಟೀಕೆ ವೈಯಕ್ತಿಕ ಅಜೆಂಡಾದಿಂದ ಕೂಡಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅವರೇಕೆ ಪ್ರಶ್ನೆ ಮಾಡಿಲ್ಲ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದರು. ಇದರಲ್ಲಿ ವೈಯಕ್ತಿಕ ಅಜೆಂಡಾ ಇಲ್ಲ, ಈ ಹಿಂದಿನ ಸರ್ಕಾರವನ್ನು ಕೂಡ ಟೀಕೆ ಮಾಡಿದ್ದೆ ಎಂದು ಕಿರಣ್ ಮಜುಂದಾರ್ ತಿರುಗೇಟು ನೀಡಿದ್ದರು. ಇದೀಗ ದೀಪಾವಳಿ ಪ್ರಯುಕ್ತ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಕಿರಣ್ ಮಜುಂದಾರ್ ಶಾ ಭೇಟಿ ಮಾಡಿ ಸಿಹಿತಿಂಡಿ ವಿತರಿಸಿ ಮೂಲಸೌಕರ್ಯ ಹೆಚ್ಚಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಸಮಸ್ಯೆಯನ್ನು ಬಗೆಹರಿಸುವ ಬದಲು ಆ ಕುರಿತು ಪ್ರಶ್ನೆ ಮಾಡಿದ ಮಜುಂದಾರ್ ಶಾ ಮೇಲೆ ದಾಳಿ ನಡೆಸಿದ್ದಕ್ಕೆ ಆರ್‌ಪಿಜಿ ಎಂಟರ್‌ಪ್ರೈಸಸ್‌ ಮುಖ್ಯಸ್ಥ, ಉದ್ಯಮಿ ಹರ್ಷ್‌ ಗೋಯೆಂಕಾ ಅಸಮಾದಾನ ವ್ಯಕ್ತಪಡಿಸಿದ್ದಾರೆ.

4. ಯುವತಿಗೆ ಕಿರುಕುಳ: ವೈದ್ಯನ ಬಂಧನ

ಚರ್ಮದ ಆರೋಗ್ಯ ಸಮಸ್ಯೆ ನಿಮಿತ್ತ ಕ್ಲಿನಿಕ್ ಗೆ ಬಂದಿದ್ದ ಯುವತಿಯೊಬ್ಬಳನ್ನು ಪರೀಕ್ಷಿಸುವ ನೆಪದಲ್ಲಿ ಮುತ್ತಿಟ್ಟು, ಬಟ್ಟೆ ಬಿಚ್ಚಲು ಒತ್ತಾಯಿಸಿದ ಆರೋಪದ ಮೇರೆಗೆ ಚರ್ಮರೋಗ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. 21 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 56 ವರ್ಷದ ಚರ್ಮ ರೋಗ ತಜ್ಞ ಡಾ. ಪ್ರವೀಣ್ ಎಂಬಾತನನ್ನು ಬೆಂಗಳೂರಿನ ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ. ಅ.20ರಂದು ಘಟನೆ ನಡೆದಿದ್ದು ಕ್ಲಿನಿಕ್ ನಲ್ಲಿ ನನ್ನಗೆ ಮುತ್ತಿಟ್ಟು ಅನುಚಿತವಾಗಿ ವರ್ತಿಸಿದರು ಎಂದು ಮಹಿಳೆ ದೂರು ನೀಡಿದ್ದು ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಈ ಘಟನೆ ಯುವತಿ ಪೋಷಕರಿಗೆ ನಡೆದ ವಿಷಯದ ತಿಳಿಸಿದ್ದು ಇದರಿಂದ ಆಕ್ರೋಶಗೊಂಡ ಪೋಷಕರು ಸ್ಥಳೀಯ ನಿವಾಸಿಗಳೊಂದಿಗೆ ಕ್ಲಿನಿಕ್​​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕ್ಲಿನಿಕ್ ಗೆ ಪೊಲೀಸರು ವೈದ್ಯನನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com