
ಬೆಂಗಳೂರು: ಬೆಂಗಳೂರಿನಲ್ಲಿ ಈ ವರ್ಷ ತೀವ್ರ ಹದಗೆಟ್ಟಿರುವ ರಸ್ತೆಗುಂಡಿ ಸಮಸ್ಯೆ ಸೇರಿದಂತೆ ಮೂಲಸೌಕರ್ಯಗಳ ಬಗ್ಗೆ ಧ್ವನಿ ಎತ್ತಿ, ಸೋಷಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರ ವಿರುದ್ಧ ತೀವ್ರ ಟೀಕೆ ಮಾಡಿ ಸುದ್ದಿಯಾಗಿದ್ದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ನಾನು ಹೆಮ್ಮೆಯ ಕನ್ನಡತಿ ಎಂದು ಹೇಳಿಕೊಂಡಿದ್ದಾರೆ.
ರಸ್ತೆ ಗುಂಡಿಗಳ ಬಗ್ಗೆ ಪೋಸ್ಟ್ ಹಾಕಿ ಟೀಕೆಗೆ ಗುರಿಯಾಗಿದ್ದ ಕಿರಣ್ ಮಜುಂದಾರ್-ಶಾ ದೀಪಾವಳಿ ಹಬ್ಬದ ನಡುವೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಕುಟಂಬದ ಮದುವೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಇದೀಗ ಇದರ ಬೆನ್ನಲೇ ಎಕ್ಸ್ನಲ್ಲಿ ನಿನ್ನೆ ಒಂದು ಪೋಸ್ಟ್ ಹಾಕಿ ನಾನು ಗುಜರಾತಿ ಅಲ್ಲ, ಕನ್ನಡತಿ ಎಂದು ಬರೆದುಕೊಂಡು ಸುದ್ದಿಯಾಗಿದ್ದಾರೆ.
ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರು ಸರ್ಕಾರವನ್ನು ಟೀಕಿಸಿದಾಗ ಹಲವರು ಅವರ ಕರ್ನಾಟಕದ ಮೇಲಿನ, ಕನ್ನಡ ಭಾಷೆಯ ಮೇಲಿನ ನಿಷ್ಠೆಯನ್ನು ಪ್ರಶ್ನೆ ಮಾಡಿದ್ದರು.
ಅದಕ್ಕೆ ಎಕ್ಸ್ ನಲ್ಲಿ ಉತ್ತರಿಸಿರುವ ಶಾ, “ನಾನು ಬೆಂಗಳೂರಿನಲ್ಲಿ ಜನಿಸಿದ್ದು, ನನ್ನ ನಗರ, ನನ್ನ ಕನ್ನಡ ಸಂಸ್ಕೃತಿಯನ್ನು ಪ್ರೀತಿಸುತ್ತಾ ಏಳು ದಶಕಗಳನ್ನು ಇಲ್ಲಿ ಕಳೆದಿದ್ದೇನೆ. ಕನ್ನಡ ಅದ್ಭುತ ಭಾಷೆ, ಅದನ್ನು ಬರೆಯಲು ಹಾಗೂ ಮಾತನಾಡಲು ಬರುತ್ತದೆ. ನನ್ನ ನಿಷ್ಠೆಯನ್ನು ಪ್ರಶ್ನಿಸುವ ಯಾರಿಗೂ ನಾನು ಉತ್ತರಿಸುವ ಅಗತ್ಯ ಇಲ್ಲ, ನಾನು ಹೆಮ್ಮೆಯ ಕನ್ನಡತಿ” ಎಂದು ಬರೆದುಕೊಂಡಿದ್ದಾರೆ.
ನನ್ನನ್ನು ಕೆಲವರು ಹೊರಗಿನವರು ಎಂದು ಭಾವಿಸಿದ್ದಾರೆ. ಉತ್ತರ ಭಾರತೀಯ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಇನ್ನು ಕೆಲವರು ನಾನು ಗುಜರಾತಿ ಎಂದು ಕಮೆಂಟ್ ಮಾಡಿದ್ದಾರೆ. ನಗರದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಬಹಿರಂಗವಾಗಿ ಮಾತನಾಡಿದಾಗ ಈ ಎಲ್ಲ ಆರೋಪ, ಪ್ರಶ್ನೆಗಳು ಬಂದಿದೆ.
ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದಾಗ ಕೆಲವರು ಗೌರವಿಸಿದ್ರು, ಇನ್ನು ಕೆಲವರು ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಾನು ನೀವು ಭಾವಿಸಿದಂತೆ ಇಲ್ಲ, ನಾನು ಕನ್ನಡತಿ ಎಂದು ಹೇಳಿದ್ದಾರೆ. ನಾನು ಈ ಮಣ್ಣಿನ ಹೆಮ್ಮೆಯ ಮಗಳು, ನಾನು ಬೆಂಗಳೂರಿನಲ್ಲಿ ಜನಿಸಿದ್ದು, ನನ್ನ ನಗರದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement