
ಹಾಸನ: ಹಾಸನದ ಶಕ್ತಿ ದೇವತೆ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಇಂದು ಮಧ್ಯಾಹ್ನ 1:06ಕ್ಕೆ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್ ಆಯಿತು. ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಅಂತಿಮ ಪೂಜೆ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಸಮ್ಮುಖದಲ್ಲಿ ಗರ್ಭಗುಡಿಗೆ ಅರ್ಚಕರು ಬೀಗ ಹಾಕಿದರು.
ಅ.9ರಿಂದ ಆರಂಭವಾಗಿ ಒಟ್ಟು 14 ದಿನಗಳ ಕಾಲ ನಡೆದ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು, ನಟ ಶಿವರಾಜ್ ಕುಮಾರ್, ರಿಷಭ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ದೇವಿಯ ದರ್ಶನ ಪಡೆದಿದ್ದಾರೆ.
ಈ ಬಾರಿ ವಿವಿಐಪಿ ಪಾಸ್‌ಗಳ ರದ್ದು ಮಾಡಿ ಗೋಲ್ಡ್ ಪಾಸ್, ಪ್ರೋಟೋಕಾಲ್‌ಗೆ ಸಮಯ ನಿಗದಿ ಮಾಡಿದ್ದರಿಂದ ಯಾವುದೇ ಗೊಂದಲ, ಅವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ಸುಗಮವಾಗಿ ಹಾಸನಾಂಬ ದೇವಿಯ ದರ್ಶನ ಆಗಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ದರ್ಶನ ಸಮಯ ವಿಳಂಬ ಬಿಟ್ಟರೆ ಉಳಿದಂತೆ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ.
ಈ ಬಾರಿಯ ಪ್ರತಿನಿತ್ಯ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಅನೇಕ ಮಂದಿ ದೇವಿ ದರ್ಶನ ಪಡೆದಿದ್ದಾರೆ. ಬುಧವಾರ ಸಂಜೆಯವರೆಗೂ 26.13 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಶೀಘ್ರ ದರ್ಶನದ ಟಿಕೆಟ್ ಮಾರಾಟದಿಂದ 21.82 ಕೋಟಿ ರೂ. ಹಣ ಸಂಗ್ರಹವಾಗಿದೆ. ಉಳಿದಂತೆ ಹುಂಡಿ ಎಣಿಕೆ ಕಾರ್ಯ ಬಾಕಿಯಿದ್ದು, 25 ಕೋಟಿ ತಲುಪಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಬಾರಿಯ ಹಾಸನಾಂಬೆ ದರ್ಶನೋತ್ಸವ ಇತಿಹಾಸ ನಿರ್ಮಿಸಿ, ದಾಖಲೆ ಬರೆಯುವ ಜೊತೆಗೆ ಅತ್ಯಂತ ಯಶಸ್ವಿ ಮತ್ತು ಅಚ್ಚುಕಟ್ಟಾಗಿ ನಡೆಯಿತು. ಮುಂದಿನ ವರ್ಷದ ಹಾಸನಾಂಬೆ ಉತ್ಸವವನ್ನು ನಿಗದಿ ಮಾಡಲಾಗಿದೆ. 2026ರ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಲಿದೆ. ಒಟ್ಟು 14 ದಿನ ಗರ್ಭಗುಡಿ ತೆರೆದಿರಲಿದ್ದು, ಈ ಪೈಕಿ 12 ದಿನ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
Advertisement