
ಹಾವೇರಿ: ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆದಿತ್ತು. ನಾಲ್ಕು ಸಾವುಗಳಲ್ಲಿ ಒಂದು ಹಾವೇರಿ ತಾಲ್ಲೂಕಿನಲ್ಲಿ, ಇನ್ನೊಂದು ತಿಲವಳ್ಳಿಯಲ್ಲಿ, ಮೂರನೇ ಸಾವು ದೇವಿಹೊಸೂರು ಗ್ರಾಮದಲ್ಲಿ ಮತ್ತು ನಾಲ್ಕನೇ ಸಾವು ಹಂಗಲ್‌ನಲ್ಲಿ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು 22 ವರ್ಷದ ಭರತ್, 75 ವರ್ಷದ ಚಂದ್ರಶೇಖರ್ ಮತ್ತು ಘನಿಸಾಬ್ ಎಂದು ತಿಳಿದುಬಂದಿದೆ ಮತ್ತೊಬ್ಬರ ಮಾಹಿತಿ ಸಿಕ್ಕಿಲ್ಲ. ಹೋರಿ ತಿವಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ನಿನ್ನೆ ಮೃತಪಟ್ಟಿದ್ದು, ಭರತ್ ಎಂಬಾತ ಇಂದು ಮೃತಪಟ್ಟಿದ್ದಾನೆ. ಹೆಸ್ಕಾಂ ನಿವೃತ್ತ ನೌಕರ ಚಂದ್ರಶೇಖರ್ ಅವರು ಮನೆಗೆ ಹೊರಟಿದ್ದ ವೇಳೆ ಹಿಂದಿನಿಂದ ಬಂದ ಹೋರಿ ತಿವಿದಿತ್ತು. ದೇವಿಹೊಸೂರು ಗ್ರಾಮದಲ್ಲಿ ಕಟ್ಟೆ ಮೇಲೆ ಕುಳಿತಿದ್ದ ಘನಿಸಾಬ್ ಗೆ ಸ್ಪರ್ಧೆಯಲ್ಲಿದ್ದ ಹೋರಿ ತಿವಿದಿತ್ತು.
ಕರ್ನಾಟಕದ ಹೋರಿ ಹಬ್ಬ, ಹಟ್ಟಿ ಹಬ್ಬ ಎಂದೂ ಕರೆಯಲ್ಪಡುವ ಈ ಹೋರಿ ಸ್ಪರ್ಧೆ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಯಾಗಿದ್ದು, ಬೆಳಕಿನ ಹಬ್ಬದ ಸಮಯದಲ್ಲಿ ಅಲಂಕರಿಸಿದ ಹೋರಿಗಳಿಗೆ ಕಟ್ಟಿದ ಬಹುಮಾನಗಳನ್ನು ಪಡೆಯಲು ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ಶಿವಮೊಗ್ಗ, ಹಾವೇರಿ ಮತ್ತು ಉತ್ತರ ಕನ್ನಡದಂತಹ ಜಿಲ್ಲೆಗಳಲ್ಲಿ ಈ ಕ್ರೀಡೆ ವಿಶೇಷವಾಗಿ ಜನಪ್ರಿಯವಾಗಿದೆ. ಇದು ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಮತ್ತು ಹಲವಾರು ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತವೆ. ಸಾವಿನ ಬಗ್ಗೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement