

ರಾಯಚೂರು: ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಎಂದು ಡಿ.ಕೆ. ಶಿವಕುಮಾರ್ ಅವರು ಸವಾಲೆಸೆದರು.
ಪಂಚಮುಖಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರೇ, ನೀವು ನಿಗದಿ ಮಾಡುವ ಸಮಯಕ್ಕೆ ನಾನು ಬರುತ್ತೇನೆ. ನಾನು ಈಗಾಗಲೇ ಸುಮಾರು 10 ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಿಗಳ ಮುಂದೆ ಗೋಗರೆದಿದ್ದೇನೆ. ಆದರೂ ಅವರು ಸಹಾಯ ಮಾಡಿಲ್ಲ. ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ 5300 ಕೋಟಿ ಇದುವರೆಗೂ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ" ಎಂದು ಕಿಡಿಕಾರಿದರು.
ನಮ್ಮ ದೇಶದಲ್ಲಿ ರಾಮನ ತಂದೆ ದಶರಥ ಮಹಾರಾಜನಿಗಿಂತ ರಾಮನ ಭಂಟ ಹನುಮಂತನ ದೇವಾಲಯ ಎಲ್ಲಾ ಕಡೆ ಇವೆ. ಆಂಜನೇಯ ಸಮಾಜ ಸೇವಕ, ತ್ಯಾಗಿ. ಸಮಾಜದಲ್ಲಿ ಯಾರು ಸೇವೆ ಮಾಡುತ್ತಾರೋ ಸಮಾಜ ಅವರನ್ನು ಗುರುತಿಸುತ್ತದೆ. ಇದಕ್ಕೆ ಪಂಚಮುಖಿ ಆಂಜನೇಯನೇ ಸಾಕ್ಷಿ. ಹೀಗಾಗಿ ಜನರ ಮಧ್ಯೆ ನಿಷ್ಪಕ್ಷಪಾತವಾಗಿ, ಸೇವಾ ಮನೋಭಾವದಲ್ಲಿ ಕೆಲಸ ಮಾಡಿದರೆ ಸಮಾಜ ನಮ್ಮನ್ನು ಗುರುತುಸುತ್ತದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ವ್ಯಕ್ತಿಗಿಂತ ಪಕ್ಷ ಮುಖ್ಯ. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡಬೇಕು. ನಾನು ಎಂದಿಗೂ ಗುಂಪು ರಾಜಕಾರಣ ಮಾಡಿಲ್ಲ. ಮಾಡಿದ್ದರೆ ಏನೇನೋ ಮಾಡಬಹುದಿತ್ತು. ಕಾಂಗ್ರೆಸ್ ಪಕ್ಷ ಇದ್ದರೆ, ನಾವು ನೀವು ಇರುತ್ತೇವೆ. ನಾನು ಉಪಮುಖ್ಯಮಂತ್ರಿಯಾಗಿರುವುದು, ದದ್ದಲ್ ಅವರು ಶಾಸಕರು ಹಾಗೂ ಅಧ್ಯಕ್ಷರಾಗಿದ್ದಾರೆ. ಬೋಸರಾಜು ಅವರು ಶಾಸಕರಲ್ಲದಿದ್ದರೂ ಅವರನ್ನು ಸಚಿವರಾನ್ನಾಗಿ ಮಾಡಲಾಗಿದೆ. ಆವರು 45 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ತೆಲಂಗಾಣದಲ್ಲಿ ದುಡಿದಿದ್ದಾರೆ. ಹಗಲು ರಾತ್ರಿ ಪಕ್ಷ ಸಂಘಟನೆ ಮಾಡಿದ್ದಾರೆ" ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಾರಣಕ್ಕೆ ಕಾರ್ಯಕರ್ತರಿಗೆ ಗ್ಯಾರಂಟಿ ಸಮಿತಿ ಸೇರಿದಂತೆ ಅನೇಕ ನಿಗಮ ಮಂಡಳಿಯಲ್ಲಿ ಅಧಿಕಾರ ನೀಡಲಾಗಿದೆ. ಯಾರು ನಿಸ್ವಾರ್ಥದಿಂದ ದುಡಿಯುತ್ತಾರೋ ಅವರನ್ನು ಪಕ್ಷ ಸಮಾಜ ಗೌರವಿಸುತ್ತದೆ. ನಿಮಗೆ ಯಾವುದೇ ಹುದ್ದೆ ಸಿಕ್ಕಿರಲಿ ಅದನ್ನು ಸಣ್ಣದು, ಚಿಕ್ಕದು ಎಂದು ಭಾವಿಸಬೇಡಿ. ರಾಜಕಾರಣದಲ್ಲಿ ಯಾರು ಯಾವ ಮಟ್ಟಕ್ಕೆ ಬೇಕಾದರೂ ಬೆಳೆಯಬಹುದು" ಎಂದು ಸಲಹೆ ನೀಡಿದರು.
ಬೂತ್ ನಲ್ಲಿ ಮುನ್ನಡೆ ತರುವವನೇ ನಾಯಕ
ನೀವು ನಿಮ್ಮ ಬೂತ್ ಗಳಲ್ಲಿ ನಾಯಕತ್ವ ವಹಿಸಿಕೊಳ್ಳಬೇಕು. ಬಿಎಲ್ ಎಗಳು ನಮಗೆ ಬೂತ್ ಮಟ್ಟದಲ್ಲಿ ಮುನ್ನಡೆ ತಂದುಕೊಡುತ್ತಾರೆ. ಹೀಗಾಗಿ ಆತನೇ ನಿಜವಾದ ನಾಯಕ. ನಿಮ್ಮ ಹೋರಾಟ ಬಿಜೆಪಿ ಹಾಗೂ ದಳದವರ ಮೇಲೆ ಇರಬೇಕೆಹೊರತು ಕಾಂಗ್ರೆಸಿಗರ ಮೇಲಲ್ಲ. ದ್ವೇಷ ಮುಖ್ಯ ಅಲ್ಲ, ಸಂಘಟನೆ ಮುಖ್ಯ. ನಾವು ನಿಮಗೆ ಎಂತಹ ಸಂಘಟನೆ ನೀಡಿದ್ದೀವಿ. ಈ ದೇಶದ ಇತಿಹಾಸದಲ್ಲಿ ಯಾವುದೇ ರಾಜ್ಯ ಸರ್ಕಾರ ಮಾಡದ ಕೆಲಸ ನಾವು ಮಾಡುತ್ತಿದ್ದೇವೆ.
ಕರ್ನಾಟಕ ಚುನಾವಣೆ ಬಳಿಕ ನಮ್ಮ ಸರ್ಕಾರ ಐದು ಗ್ಯಾರಂಟಿ ನೀಡಿದ್ದು, ಬಿಜೆಪಿ ನಾಯಕರು ಇದನ್ನು ಟೀಕೆ ಮಾಡಿದರು. ಯಡಿಯೂರಪ್ಪ ಆವರು ಒಂದು ಅಕ್ಕಿ ಕಾಳು ಕಡಿಮೆಯಾದರೂ ನಾವು ಸಹಿಸುವುದಿಲ್ಲ ಎನ್ನುತ್ತಿದ್ದರು. ನಾವು ಮೊದಲ ಸಂಪುಟ ಸಭೆಯಲ್ಲಿ ಎಲ್ಲಾ ಯೋಜನೆ ಜಾರಿಗೆ ಅನುಮೋದನೆ ನೀಡಲಾಯಿತು" ಎಂದು ಹೇಳಿದರು.
"ಬಡವರ ಬದುಕಿನ ಬಗ್ಗೆ ನಾವು ಚಿಂತನೆ ನಡೆಸಿ, ಐದು ಗ್ಯಾರಂಟಿ ನೀಡಿದೆವು. ಈ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತದೆ ಎಂದರು. ನಂತರ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಮ್ಮ ಯೋಜನೆ ನಕಲು ಮಾಡಿದ್ದಾರೆ. ಈಗ ಬಿಹಾರದಲ್ಲಿ ಮಹಿಳೆಯರಿಗೆ ಒಂದೇ ಬಾರಿಗೆ 10 ಸಾವಿರ ನೀಡುತ್ತಿದ್ದಾರೆ. ಆಮೂಲಕ ನಮ್ಮ ಗ್ಯಾರಂಟಿ ಯೋಜನೆಗಳನ್ನು ಆವರು ನಕಲು ಮಾಡುತ್ತಿದ್ದಾರೆ. ಆ ಮೂಲಕ ನೀವು ಜನರ ಬಳಿ ಹೋಗಲು ಶಕ್ತಿ ತುಂಬಿದ್ದೇವೆ" ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
Advertisement