

ಬೆಂಗಳೂರು: ಮಾಜಿ ಬಿಗ್ಬಾಸ್ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ವಿರುದ್ಧ ದೂರು ದಾಖಲಾಗಿದೆ. ಅಕ್ಟೋಬರ್ 04 ರಂದು ನಟಿ ದಿವ್ಯಾ ಸುರೇಶ್ ಕಾರಿನಲ್ಲಿ ಅಪಘಾತ ಮಾಡಿ ಸ್ಥಳದಿಂದ ಪರಾರಿ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಕ್ಟೋಬರ್ 04 ರಂದು ಕಿರಣ್, ಅನುಷಾ, ಅನಿತಾ ಎಂಬವರು ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ ರಸ್ತೆ ಬಳಿ ನಾಯಿಗಳಿದ್ದು, ಭಯದಿಂದ ಕಿರಣ್ ಬೈಕ್ ಅನ್ನು ಸ್ವಲ್ಪ ಬಲಕ್ಕೆ ತಂದಿದ್ದಾರೆ.
ಈ ವೇಳೆ ವೇಗವಾಗಿ ಬಂದ ದಿವ್ಯಾ ಸುರೇಶ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮೂವರೂ ಬೈಕ್‌ನಿಂದ ಬಿದ್ದಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಅನಿತಾ ಎಂಬವರ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟಾಗಿದೆ.
ಘಟನೆಯಲ್ಲಿ ಅನಿತಾ ಅವರ ಕಾಲು ಮುರಿದಿದೆ. ಆದರೆ ದಿವ್ಯಾ ಅವರು ಕಾರು ನಿಲ್ಲಿಸದೆ ಅಲ್ಲಿಂದ ಪರಾರಿ ಆಗಿದ್ದಾರೆ. ಘಟನೆ ಕುರಿತಂತೆ ದಿವ್ಯಾ ಸುರೇಶ್ ವಿರುದ್ಧ ಕಿರಣ್ ಎಂಬುವರು ದೂರು ನೀಡಿದ್ದಾರೆ.
ನಮ್ಮ ಸಂಬಂಧಿ ಅನುಷಾಗೆ ಹುಷಾರಿರಲಿಲ್ಲ. ಹೀಗಾಗಿ ರಾತ್ರಿ ಗಿರಿನಗರ ಆಸ್ಪತ್ರೆಗೆ ಹೋಗುತ್ತಿದ್ದೆವು. ಬೈಕ್‌ನಲ್ಲಿ ಮಧ್ಯೆ ಅನುಷಾ ಕುಳಿತಿದ್ದರು. ನಾನು ಬೈಕ್ ಓಡಿಸುತ್ತಾ ಇದ್ದೆ. ಅನಿತಾ ಹಿಂದೆ ಕುಳಿತಿದ್ದರು. ಏಕಾಏಕಿ ಕ್ರಾಸ್‌ನಲ್ಲಿ ಬಂದು ದಿವ್ಯಾ ಸುರೇಶ್ ಕಾರು ಅನಿತಾ ಅವರ ಕಾಲಿಗೆ ಗುದ್ದಿದೆ.
ನಾವೆಲ್ಲರೂ ಕೆಳಗೆ ಬಿದ್ದೆವು. ಕೂಗಿದರೂ ನಿಲ್ಲಿಸದೇ ದಿವ್ಯಾ ಸುರೇಶ್ ಕಾರು ತೆಗೆದುಕೊಂಡು ಎಸ್ಕೇಪ್ ಆದರು. ಬಳಿಕ ನಾವು ಬಂದು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದೆವು.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ ದಿವ್ಯಾ ಸುರೇಶ್, ಅನಿತಾ ಹೇಗಿದ್ದಾರೆ ಎಂದು ಸಹ ವಿಚಾರಿಸಿಲ್ಲ ಎಂದು ಕಿರಣ್ ಅವರು ದೂರು ನೀಡಿದ್ದಾರೆ.
Advertisement