

ಕಲಬುರಗಿ: ಅಕ್ಟೋಬರ್ 28 ರಂದು ಉದ್ದೇಶಿತ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ರೂಟ್ ಮಾರ್ಚ್‌ನ ಆಯೋಜಕರೊಂದಿಗೆ ಶಾಂತಿ ಸಭೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಆರ್‌ಎಸ್‌ಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ, ಚಿತ್ತಾಪುರ ಪಟ್ಟಣದಲ್ಲಿ ಕೆಲವು ರೀತಿಯ ಉದ್ವಿಗ್ನತೆ ಉಂಟಾಗಿದೆ ಎಂದು ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಗಮನಿಸಿ, ಅಕ್ಟೋಬರ್ 28ಕ್ಕೆ ಶಾಂತಿ ಸಭೆ ನಡೆಸಬೇಕು. ಅಕ್ಟೋಬರ್ 30ರಂದು ವರದಿ ನೀಡುವಂತೆ ಸೂಚಿಸಿದೆ. ಈ ವರದಿ ಆಧಾರದ ಮೇಲೆ ಹೈಕೋರ್ಟ್ ತೀರ್ಪು ನೀಡಲಿದೆ.
ಇದರೊಂದಿಗೆ ನವೆಂಬರ್ 2ರಂದು ಪಥಸಂಚಲನಕ್ಕೆ ಹೈಕೋರ್ಟ್ ಇಂದು ಅನುಮತಿ ನೀಡುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದ ಆರ್ಎಸ್ಸ್ ಮುಖಂಡರಿಗೆ ಕೊಂಚ ನಿರಾಸೆಯಾಗಿದೆ.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ ಎರಡು ಅಭಿಪ್ರಾಯಗಳನ್ನು ನೀಡಿದ್ದಾರೆ. ಜನರಿಗೆ ತೊಂದರೆಯಾಗುವ ಬಗ್ಗೆ ಕಲಬುರಗಿ ಎಸ್‌ಪಿ ವರದಿ ನೀಡಿದ್ದಾರೆ. ಪಥಸಂಚಲನದ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಪರಿಸ್ಥಿತಿ ಸಾಮಾನ್ಯವಾದ ನಂತರ ಪಥಸಂಚಲನ ಸೂಕ್ತ. ಕೆಲ ವಾರಗಳ ಬಳಿಕ ಪಥಸಂಚಲನ ನಡೆಸುವುದು ಸೂಕ್ತವೆಂದು ವರದಿಯಿದೆ. ಇದರಿಂದ ಯಾವುದೇ ಸಂಘಟನೆಗಳಿಗೂ ಅನುಮತಿ ನೀಡದಂತೆ ವರದಿಯಿದೆ ಎಂದು ಹೇಳಿದರು.
Advertisement