

ಕಲಬುರಗಿ: ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ನಿರ್ದೇಶನದಂತೆ ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಕಲಬುರಗಿ ಜಿಲ್ಲಾಡಳಿತ ಮತ್ತು ಚಿತ್ತಾಪುರ ತಹಶೀಲ್ದಾರ್‌ಗೆ ಆರ್‌ಎಸ್‌ಎಸ್ ಮನವಿ ಪತ್ರ ಸಲ್ಲಿಸಿದೆ.
ಈತನ್ಮಧ್ಯೆ ಭೀಮ್ ಆರ್ಮಿ ಮತ್ತು ದಲಿತ ಪ್ಯಾಂಥರ್ಸ್ ಕೂಡ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಉದ್ದೇಶಿಸಿರುವ ಅದೇ ದಿನ ಮತ್ತು ಅದೇ ಸಮಯದಲ್ಲಿ ಮೆರವಣಿಗೆಗಳನ್ನು ನಡೆಸಲು ಅನುಮತಿ ನೀಡುವಂತೆ ಚಿತ್ತಾಪುರ ತಹಶೀಲ್ದಾರ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ.
ಭಮ್ ಆರ್ಮಿ ತನ್ನ ನೀಲಿ ಧ್ವಜ ಮತ್ತು ಲಾಠಿ ಹಿಡಿದು ಮೆರವಣಿಗೆ ನಡೆಸಲು ಅವಕಾಶ ನೀಡುವಂತೆ ತಹಶೀಲ್ದಾರ್'ಗೆ ಮನವಿ ಮಾಡಿಕೊಂಡಿದೆ.
ಇದಲ್ಲದೆ. ಕುರುಬ ಎಸ್‌ಟಿ ಕ್ರಿಯಾ ಸಮಿತಿ ಕೂಡ ನವೆಂಬರ್ 2 ರಂದು ಪ್ರತಿಭಟನಾ ಕಾರ್ಯಕ್ರಮವನ್ನು ನಡೆಸಲು ಅನುಮತಿ ಕೋರಿ ಅರ್ಜಿಯನ್ನು ಸಲ್ಲಿಸಿದೆ ಎಂದು ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ್ ಅವರು ಹೇಳಿದ್ದಾರೆ.
ಮತ್ತೊಂದು ಸಂಘಟನೆಯಾದ ಸೌಹಾರ್ದ ಕರ್ನಾಟಕ ವೇದಿಕೆಯು ನವೆಂಬರ್ 2 ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸುವುದನ್ನು ನಿಷೇಧಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಚಿತ್ತಾಪುರದಲ್ಲಿ ರೂಟ್ ಮಾರ್ಚ್ ನಡೆಸುವುದನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿತ್ತು.
ನವೆಂಬರ್ 2 ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸಬಹುದೇ ಮತ್ತು ಮೆರವಣಿಗೆ ನಡೆಸಲು ಸಿದ್ಧರಿದ್ದರೆ, ಅಕ್ಟೋಬರ್ 24 ರ ಮೊದಲು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಆರ್‌ಎಸ್‌ಎಸ್'ಗೆ ಸೂಚಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್ ಪೊಲೀಸರಿಂದ ವರದಿ ಪಡೆದ ನಂತರ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಮಾತನಾಡಿ, ಈ ವಿಷಯದ ಬಗ್ಗೆ ಪೊಲೀಸ್ ಇಲಾಖೆ ಕಾನೂನು ಅಭಿಪ್ರಾಯವನ್ನು ಕೋರಿದೆ ಎಂದು ತಿಳಿಸಿದ್ದಾರೆ.
Advertisement