

ದಾವಣಗೆರೆ: ಅಡಿಕೆಗೆ ಮಾರುಕಟ್ಟೆಯಲ್ಲಿ ಈಗ ಇರುವ ಬಂಪರ್ ಬೆಲೆ ರೈತರಿಗೆ ಸಿಗುತ್ತಿಲ್ಲ. ತಮ್ಮ ದಾಸ್ತಾನನ್ನು ಒಣಗಿಸಿ ಇಟ್ಟಿದ್ದ ವ್ಯಾಪಾರಿಗಳು ಮಾತ್ರ ಈಗ ಬೆಲೆಯ ಲಾಭವನ್ನು ಪಡೆಯುತ್ತಿದ್ದಾರೆ. ಬೇಡಿಕೆಯ ಏರಿಕೆಯನ್ನು ನಿರೀಕ್ಷಿಸದೆ, ಹೆಚ್ಚಿನ ರೈತರು ಈಗಾಗಲೇ ತಮ್ಮ ಬೆಳೆಯನ್ನು ಮಾರಾಟ ಮಾಡಿದ್ದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಒಂದು ಕ್ವಿಂಟಲ್ ರಾಶಿ ಅಡಿಕೆಗೆ 65,099 ರೂ., ಹೊಳಲ್ಕೆರೆಯಲ್ಲಿ 65,390 ರೂ. ಮತ್ತು ಚನ್ನಗಿರಿಯ ತುಮ್ಕೋಸ್ ಮಾರುಕಟ್ಟೆಯಲ್ಲಿ 66,669 ರೂಪಾಯಿಗಳು ನಿನ್ನೆ ಇದ್ದವು. ಇದು ಈ ಋತುವಿನಲ್ಲಿ ತಲುಪಿದ ಅತ್ಯಧಿಕ ಅಡಿಕೆ ಬೆಲೆಯಾಗಿದೆ.
ಬೆಲೆ ಇನ್ನೂ ಎತ್ತರಕ್ಕೆ ಹೋದ ನಂತರ ಕ್ವಿಂಟಲ್‌ಗೆ 50,000 ರೂಪಾಯಿಗೆ ಸ್ಥಿರವಾಗಬಹುದು ಎಂದು ಕರ್ನಾಟಕದ ಅತಿದೊಡ್ಡ ಅಡಿಕೆ ಮಾರುಕಟ್ಟೆಯಾದ ಭೀಮಸಮುದ್ರದ ವ್ಯಾಪಾರಿಗಳು ಹೇಳುತ್ತಾರೆ.
ಸಿಪ್ಪೆರಹಿತ ಅಡಿಕೆ ಬೆಳೆ ಕ್ವಿಂಟಲ್‌ಗೆ ಸುಮಾರು 7,500 ರೂಪಾಯಿ ಬೆಲೆ ನೀಡಲಾಗುತ್ತಿದ್ದು, ವ್ಯಾಪಾರಿಗಳು ಅದನ್ನು ಖರೀದಿಸಲು ತೋಟಗಳಿಗೆ ಧಾವಿಸುತ್ತಿದ್ದಾರೆ. ಈ ಋತುವಿನಲ್ಲಿ ಇಳುವರಿ ಕಡಿಮೆಯಾಗಿದ್ದು ಮತ್ತು ಅದರ ಪರಿಣಾಮವಾಗಿ ಉತ್ಪನ್ನಗಳ ಕೊರತೆಯೇ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಶಿವಮೊಗ್ಗ, ಚನ್ನಗಿರಿ ಮತ್ತು ರಾಜ್ಯದ ಇತರ ನಿಯಮಿತವಾಗಿ ಬೆಳೆಯುವ ಪ್ರದೇಶಗಳಲ್ಲಿ ಹಣ್ಣು ಕೊಳೆತ ಮತ್ತು ಹಳದಿ ಎಲೆ ರೋಗವು ಅಡಿಕೆ ಬೆಳೆಯನ್ನು ನಾಶಪಡಿಸಿದೆ.
ಅಡಿಕೆ ವ್ಯಾಪಾರ ನಿರ್ಧರಿತ ಮಾರುಕಟ್ಟೆಗಳು, ಸಂಗ್ರಹ ಸಮಸ್ಯೆ
ರಾಜ್ಯದಲ್ಲಿ ಅಡಿಕೆ ವ್ಯಾಪಾರವು ಹೆಚ್ಚಾಗಿ ಭೀಮಸಮುದ್ರ, ಚನ್ನಗಿರಿ, ಶಿವಮೊಗ್ಗ ಮತ್ತು ಶಿರಸಿಯ ಮಾರುಕಟ್ಟೆಗಳನ್ನು ಅವಲಂಬಿಸಿದೆ. ಉತ್ತರ ಭಾರತದ ಪಾನ್ ಮಸಾಲಾ ಕಂಪನಿಗಳು ಈ ಮಾರುಕಟ್ಟೆಗಳಿಂದ ಅಡಿಕೆಯನ್ನು ಖರೀದಿಸುತ್ತವೆ.
ಪ್ರತಿ ವರ್ಷ ಈ ಸಮಯದಲ್ಲಿ, ದಾವಣಗೆರೆ ಮತ್ತು ಚಿತ್ರದುರ್ಗದಿಂದ ಅಡಿಕೆ ಮಾರುಕಟ್ಟೆಗಳನ್ನು ತಲುಪುತ್ತದೆ. ಈ ಋತುವಿನಲ್ಲಿ, ಅತಿಯಾದ ಮಳೆಯಿಂದಾಗಿ, ಈ ಪ್ರದೇಶಗಳಲ್ಲಿ ಅಡಿಕೆ ಸಂಸ್ಕರಣೆ ಇನ್ನೂ ಪ್ರಾರಂಭವಾಗಿಲ್ಲ.
ಈ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಬೇಡಿಕೆ ಮತ್ತು ಪೂರೈಕೆ ಪರಿಸ್ಥಿತಿ ತೀವ್ರಗೊಂಡಿದೆ. ಅನೇಕ ಅಡಿಕೆ ತೋಟಗಳಲ್ಲಿ ನೀರು ಸಂಗ್ರಹವಾಗಿ ಇಳುವರಿ ಕಡಿಮೆಯಾಗಲು ಒಂದು ಪ್ರಮುಖ ಕಾರಣವಾಗಿದೆ.
ಕಡಿಮೆ ಇಳುವರಿ
ಭೀಮಸಮುದ್ರದ ವ್ಯಾಪಾರಿ ಬಿ.ಟಿ. ಸಿದ್ದೇಶ್, ಕಡಿಮೆ ಇಳುವರಿ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆ ಪ್ರತಿನಿಧಿಗೆ ತಿಳಿಸಿದರು. ಕೆಲವು ವ್ಯಾಪಾರಿಗಳು ಹೆಚ್ಚಿನ ಬೆಲೆ ಬಂದಾಗ ಮಾರಾಟ ಮಾಡಲು ಸಂಗ್ರಹಿಸಿಡುತ್ತಾರೆ. ಬೆಲೆ ಇನ್ನೂ ಕ್ವಿಂಟಲ್‌ಗೆ 80,000 ರೂಪಾಯಿಗಳವರೆಗೆ ಏರಿಕೆಯಾಗಬಹುದು ನಂತರ 50,000 ರೂಪಾಯಿಗಳಲ್ಲಿ ಸ್ಥಿರವಾಗಬಹುದು ಎಂದು ಅವರು ಹೇಳಿದರು.
ದಾವಣಗೆರೆಯ ವ್ಯಾಪಾರಿ ಗಡಿಗುಡಲ್ ಮಂಜುನಾಥ್, ಕೆಲವೇ ರೈತರ ಬಳಿ ಸಂಗ್ರಹ ಉಳಿದಿದೆ ಎಂದು ಹೇಳಿದರು. ಈ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ರೈತರಿಗೆ ಸರಿಯಾಗಿ ಬೆಳೆ ಕೈಗೆ ಸಿಗುತ್ತಿಲ್ಲ. ಸಂಸ್ಕರಿಸುತ್ತಿಲ್ಲವಾದ್ದರಿಂದ ಹೊಸ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಅಡಿಕೆ ಮೇಲಿನ ಆಮದು ನಿಷೇಧ ಮುಂದುವರಿದರೆ, ಬೆಲೆಗಳು ಹೆಚ್ಚಿನ ದರದಲ್ಲಿ ಸ್ಥಿರವಾಗುತ್ತವೆ ಮತ್ತು ಪರಿಸ್ಥಿತಿ ಚಿನ್ನದ ಬೆಲೆಗಳಂತೆಯೇ ಇದೆ ಎನ್ನುತ್ತಾರೆ.
ದೊಡ್ಡ ಸಿದ್ದವ್ವನಹಳ್ಳಿಯ ರೈತ ಕೃಷ್ಣಮೂರ್ತಿ, ಪ್ರಸ್ತುತ ಬೆಲೆಗಳ ಪ್ರವೃತ್ತಿ ಖುಷಿಯ ವಿಚಾರ. ಆದರೆ ನಾವು ಈಗಾಗಲೇ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ದೊಡ್ಡ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಈಗ ನಾನು ಭವಿಷ್ಯದ ಬೆಳೆಗಳನ್ನು ಸಂಗ್ರಹಿಸುವತ್ತ ಗಮನಹರಿಸುತ್ತಿದ್ದೇನೆ ಇದರಿಂದ ನನಗೂ ಉತ್ತಮ ಬೆಲೆ ಸಿಗುತ್ತದೆ ಎನ್ನುತ್ತಾರೆ.
ಸೆಂಟ್ರಲ್ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (CAMPCO) ಅಧಿಕಾರಿಗಳು ಉತ್ಪನ್ನಗಳ ಕೊರತೆ ಮತ್ತು ದೊಡ್ಡ ವ್ಯಾಪಾರಿಗಳು ಸಂಗ್ರಹಿಸಿಟ್ಟುಕೊಳ್ಳುವುದು ಬೆಲೆ ಏರಿಕೆಗೆ ಕಾರಣಗಳಾಗಿವೆ ಎಂದು ಹೇಳುತ್ತಾರೆ. ಈ ಅಸ್ಥಿರ ಪರಿಸ್ಥಿತಿ ಹೆಚ್ಚು ಕಾಲ ಮುಂದುವರಿಯುವುದಿಲ್ಲ, ಶೀಘ್ರದಲ್ಲೇ ಬದಲಾಗಬಹುದು ಎನ್ನುತ್ತಾರೆ.
Advertisement