

ಬೆಳಗಾವಿ: ಕಿತ್ತೂರಿಗೆ ಭೇಟಿ ನೀಡುವ ಯಾವುದೇ ಮುಖ್ಯಮಂತ್ರಿ ಶೀಘ್ರದಲ್ಲೇ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢ ನಂಬಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಧಿಕ್ಕರಿಸಿದ್ದು, ಕಿತ್ತೂರಿನಲ್ಲಿ ನಡೆಯುತ್ತಿರುವ 201ನೇ ಕಿತ್ತೂರು ವಿಜಯೋತ್ಸವದ ಸಮಾರೋಪದಲ್ಲಿ ಭಾಗವಹಿಸಲು ಮುಂದಾಗಿದ್ದಾರೆ.
ಗುರುವಾರದಿಂದ ವಿಜಯೋತ್ಸವದ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಅ.25ರಂದು ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಸಚಿವರು ಪಾಲ್ಗೊಳ್ಳಲಿದ್ದಾರೆ.
ಸಂಜೆ 4ಕ್ಕೆ ಬೆಂಗಳೂರಿನಿಂದ ವಿಮಾನದಲ್ಲಿ ಹೊರಡುವ ಮುಖ್ಯಮಂತ್ರಿಗಳು, ಸಂಜೆ 5ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ರಸ್ತೆ ಮೂಲಕ ಕಿತ್ತೂರಿನ ಕೋಟೆಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ. ರಸ್ತೆ ಮೂಲಕ ಹುಬ್ಬಳ್ಳಿಗೆ ತೆರಳಿ, ವಿಮಾನದ ಮೂಲಕ ಬೆಂಗಳೂರಿಗೆ ಮರಳುವರು ಎಂದು ಪ್ರಕಟಣೆ ತಿಳಿಸಿದೆ.
ಕಳೆದ ವರ್ಷ ಕೂಡ ಸಿದ್ದರಾಮಯ್ಯ ಅವರು ಕಿತ್ತೂರು ಉತ್ಸವದಲ್ಲಿ ಭಾಗವಹಿಸಿದ್ದರು. ನಾಯಕತ್ವವು ಮೂಢನಂಬಿಕೆಯಲ್ಲ, ಧೈರ್ಯ ಮತ್ತು ದೃಢಸಂಕಲ್ಪದ ಬಗ್ಗೆ ಎಂದು ಸಾಬೀತುಪಡಿಸಿದ್ದರು. ಈ ವರ್ಷ ಕೂಡ ಸತತ ಎರಡನೇ ಬಾರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಅವರ ನಿರ್ಧಾರವು ಕಿತ್ತೂರಿನ ಜನರಿಗೆ ಸಂತಸ ತಂದಿದೆ,
ಮೂಢ ನಂಬಿಕೆಯ ವಿರುದ್ಧ ಸಿದ್ದರಾಮಯ್ಯ ಅವರ ನಿಲುವು ಹೊಸದೇನಲ್ಲ. ವಾಸ್ತು ಸಂಬಂಧಿತ ಮೂಢನಂಬಿಕೆಗಳಿಂದಾಗಿ ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ವಿಧಾನಸೌಧದ ದಕ್ಷಿಣ ದ್ವಾರವನ್ನು ಸಿದ್ದರಾಮಯ್ಯ ಅವರು ಮತ್ತೆ ತೆರೆದಿದ್ದರು. ಅಧಿಕಾರ ಕಳೆದುಕೊಳ್ಳುವ ಭಯದಿಂದ ಅನೇಕ ರಾಜಕಾರಣಿಗಳು ತಪ್ಪಿಸಿಕೊಂಡಿದ್ದ ಚಾಮರಾಜನಗರ ಮತ್ತು ಹಂಪಿಗೂ ಭೇಟಿ ನೀಡಿದ್ದರು.
Advertisement