

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಲವು ಮಹಿಳೆಯರ ಅತ್ಯಾಚಾರ, ಕೊಲೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಮೂವರು ಸಾಮಾಜಿಕ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಟಿ ಜಯಂತ್ ಮತ್ತು ಗಿರೀಶ್ ಮಟ್ಟಣ್ಣವರ್ ಅವರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ಬಂಧಿಸಬೇಕಾಗುತ್ತದೆ ಎಂದು ಪೊಲೀಸರು ನೋಟಿಸ್ ನಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ಹೇಳಿವೆ.
ಎಸ್‌ಐಟಿ ತನಿಖೆಯು ನಿರ್ಣಾಯಕ ಹಂತಕ್ಕೆ ಬಂದಿದ್ದು, ಮುಕ್ತಾಯದ ಹಂತದಲ್ಲಿದೆ ಎಂದು ಎಸ್‌ಐಟಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1995 ರಿಂದ 2014 ರವರೆಗೆ ದೇವಸ್ಥಾನದಲ್ಲಿ ಮಾಜಿ ಸ್ವಚ್ಛತ ಕೆಲಸಗಾರನಾಗಿದ್ದ ಚಿನ್ನಯ್ಯ ಅವರು 2002 ಮತ್ತು 2014 ರ ನಡುವೆ ದೇವಾಲಯದ ಆವರಣದಲ್ಲಿ 200 ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ರಹಸ್ಯವಾಗಿ ಹೂತ್ತಿಟ್ಟಿರುವುದಾಗಿ ಆರೋಪಿಸಿ 2025 ಆಗಸ್ಟ್ ನಲ್ಲಿ ದೂರು ದಾಖಲಿಸಿದ್ದರು. ಅಪಘಾತಗಳು, ಕೊಲೆ ಮತ್ತು ಅನುಮಾಸ್ಪಾದವಾಗಿ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆ ಇಲ್ಲದೆ ಅಥವಾ ಪೊಲೀಸರ ವರದಿಯಿಲ್ಲದೆ ಹೂತು ಹಾಕಲಾಗಿದೆ ಎಂದು ಹೇಳಿದ್ದರು.
ಚಿನ್ನಯ್ಯ ಸಾಕ್ಷ್ಯವಾಗಿ ಪ್ರಸ್ತುತಪಡಿಸಿದ ಮಾನವ ತಲೆಬುರುಡೆಯನ್ನು ಆ ಸ್ಥಳದಿಂದಲೇ ತರಲಾಗಿದೆ ಎಂಬ ಚಿನ್ನಯ್ಯ ಹೇಳಿಕೆ ದೇವಾಲಯದ ಲಕ್ಷಾಂತರ ವಾರ್ಷಿಕ ಭಕ್ತರಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತು.
ಈ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿತ್ತು. ಚಿನ್ನಯ್ಯ ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಹಾಗೂ ಗಿರೀಶ್ ಮಟ್ಟಣ್ಣವರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ವಿಚಾರಣೆ ವೇಳೆ ಬಯಲಾಗಿದೆ. ಚಿನ್ನಯ್ಯ ದೂರು ನೀಡುವ ಮುನ್ನಾ ತಿಮರೋಡಿ ನಿವಾಸದಲ್ಲಿ ಆಶ್ರಯ ನೀಡಿದ್ದರು. ಆಗಸ್ಟ್ 26 ರಂದು ಎಸ್‌ಐಟಿ ಅಲ್ಲಿ ನಡೆಸಿದ ಶೋಧದಲ್ಲಿ ಚಿನ್ನಯ್ಯನ ಮಾಧ್ಯಮ ಸಂವಾದದ 25 ವೀಡಿಯೊಗಳಿರುವ ಲ್ಯಾಪ್‌ಟಾಪ್‌ಗಳು ಸೇರಿದಂತೆ 44 ವಸ್ತುಗಳು ಮತ್ತು 21 ಹೆಚ್ಚುವರಿ ರೆಕಾರ್ಡಿಂಗ್‌ಗಳನ್ನು ಹೊಂದಿರುವ ಫೋನ್‌ಗಳನ್ನು ವಶಪಡಿಸಿಕೊಂಡಿತ್ತು.
ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಮತ್ತು ತಿಮರೋಡಿ ಸಹವರ್ತಿ ಟಿ.ಜಯಂತ್, ಚಿನ್ನಯ್ಯನನ್ನು ಬೆಂಗಳೂರಿನ ನಿವಾಸಕ್ಕೆ ಕರೆತಂದು ಮೂರು ದಿನಗಳ ಕಾಲ ಆತಿಥ್ಯ ನೀಡಿದ್ದರು. ಅಲ್ಲದೇ ಸುಜಾತಾ ಭಟ್, ಗಿರೀಶ್ ಮಟ್ಟಣ್ಣನವರ್ ಅವರೊಂದಿಗೆ ತಲೆಬುರುಡೆಯೊಂದಿಗೆ ದೆಹಲಿಗೆ ಹೋಗಿದ್ದರು. ಮಟ್ಟಣ್ಣನವರ್ ಅವರ ಸೂಚನೆಯಂತೆ ತಾನು ನಡೆದುಕೊಂಡಿದ್ದೇನೆ ಎಂದು ಜಯಂತ್ ನಂತರ ಎಸ್‌ಐಟಿಗೆ ಹೇಳಿದ್ದರು. ಪಿತೂರಿ ಮಾಡುವ ಉದ್ದೇಶವಿಲ್ಲ ಆದರೆ ಆರೋಪಗಳನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ಅಲ್ಲದೆ 2002-2003ರಲ್ಲಿ ಧರ್ಮಸ್ಥಳದ ಬಳಿ 15 ವರ್ಷದ ಬಾಲಕಿಯ ಶವವನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿ ಪ್ರತ್ಯೇಕ ದೂರು ದಾಖಲಿಸಿದ್ದರು.
ಮಾಜಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಸೌಜನ್ಯ ಹೋರಾಟ ಸಮಿತಿ ಸಮನ್ವಯಾಧಿಕಾರಿಯಾದ ಗಿರೀಶ್ ಮಟ್ಟಣ್ಣವರ್ , ಏಪ್ರಿಲ್ 2025 ರಲ್ಲಿ ಜಯಂತ್‌ಗೆ ಚಿನ್ನಯ್ಯನನ್ನು ಪರಿಚಯಿಸಿದ್ದರು. ತಲೆಬುರುಡೆ ಸಾಗಿಸಲು ಸಂಚು ರೂಪಿಸಿದ್ದರು.
ಸೆಪ್ಟಂಬರ್‌ನಲ್ಲಿ ಹಲವು ಬಾರಿ ಪ್ರಶ್ನಿಸಲಾಗಿದ್ದು, ದೇವಸ್ಥಾನದ ಮುಖ್ಯಸ್ಥ ಡಿ ವೀರೇಂದ್ರ ಹೆಗ್ಗಡೆಯವರ ಮಾನಹಾನಿ ಮಾಡುವ ಜಾಲವನ್ನು ರೂಪಿಸಿದ ಆರೋಪದಲ್ಲಿ ಮಟ್ಟಣ್ಣನವರ್ ವಿರುದ್ಧ ಆರೋಪವಿದೆ
Advertisement