

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಸಂಸದರಾಗಿದ್ದುಕೊಂಡು ಪ್ರಧಾನಿ ಮೋದಿಯವರ ಬಳಿ ಮಾತನಾಡಿ ಬೆಂಗಳೂರು ಅಭಿವೃದ್ಧಿ ಕೆಲಸಗಳಿಗೆ ಒಂದು ಹತ್ತು ರೂಪಾಯಿ ಕೊಡಿಸಲು ಆಗಿಲ್ಲ. ರಾಜ್ಯ ಸರ್ಕಾರವನ್ನು ಟೀಕಿಸುವವರು ಒಂದು ಪ್ಲಾನ್ ಆಫ್ ಆಕ್ಷನ್(Plan of Action) ಕೊಡಲು ಹೇಳಿ, ಏನಿದು ಬೆಂಗಳೂರಿಗೆ ಪ್ಲಾನ್ ಆಫ್ ಆಕ್ಷನ್ ಗೊತ್ತಿದೆಯೇ ಅವರಿಗೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಇಂದು ಬೆಂಗಳೂರು ನಡಿಗೆ ಕಾರ್ಯಕ್ರಮ ಮುಗಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರವಿದ್ದಾಗ ಬೆಂಗಳೂರಿಗೆ ಪ್ಲಾನ್ ಆಫ್ ಆಕ್ಷನ್ ಏನು ಮಾಡಿದರು, ಯಾಕೆ ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸಲಿಲ್ಲ, ಕಸ ವಿಲೇವಾರಿ ಸಮಸ್ಯೆಗೆ ಟೆಂಡರ್ ಕರೆಯಲು ಏಕೆ ಸಾಧ್ಯವಾಗಿಲ್ಲ, ರಸ್ತೆ ಅಗಲೀಕರಣ, ಫ್ಲೈ ಓವರ್ ಮಾಡಲು ಸಾಧ್ಯವಾಗಿಲ್ಲ, ಅವರ ಕೈಯಿಂದ ಏನೂ ಮಾಡಲು ಸಾಧ್ಯವಾಗಿಲ್ಲ, ಈಗ ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದರು.
ತೇಜಸ್ವಿ ಸೂರ್ಯ ಖಾಲಿ ಟ್ರಂಕ್
ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರವಾಗಿ, ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, ಬಿಜೆಪಿ ಸಂಸದ ತೇಜಸ್ವಿ ವಿರುದ್ಧ ವಾಗ್ದಾಳಿ ನಡೆಸಿ ತೇಜಸ್ವಿ ಸೂರ್ಯ ಒಬ್ಬ ಖಾಲಿ ಟ್ರಂಕ್ ಎಂದು ಕಿಡಿಕಾರಿದರು.
ಲಾಲ್ ಬಾಗ್ ಗೆ ಸುರಂಗ ಮಾರ್ಗ ನಿರ್ಮಾಣ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಆಗಲ್ಲ. ತೇಜಸ್ವಿ ಸೂರ್ಯ ಯಾರು? ಎಂಪಿ ಆಗಿ ಪ್ರಧಾನಿ ಹತ್ರ ರೂ.10 ಕೂಡ ಅನುದಾನ ತಂದಿಲ್ಲ. ಆತನೊಬ್ಬ ಖಾಲಿ ಟ್ರಂಕ್ ತೇಜಸ್ವಿ ಸೂರ್ಯ. ಟೀಕೆಗಳು ಸಾಯುತ್ತವೆ ಕೆಲಸಗಳು ಮಾತ್ರ ಉಳಿಯುತ್ತವೆ. ಬಿಜೆಪಿ ಅವಧಿಯಲ್ಲಿ ಯಾವುದೇ ಕೆಲಸ ಆಗಿಲ್ಲ ಎಂದರು.
ಮಾಫಿಯಾದ ಜೊತೆ ಶಾಮೀಲು
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಾಫಿಯಾದವರ ಜೊತೆ ಕೈಜೋಡಿಸಿ ಬೆಂಗಳೂರನ್ನು ಹದಗೆಡಿಸಿ, ರಾಜ್ಯವನ್ನು ಕೂಡ ಅಭಿವೃದ್ಧಿಕುಂಠಿತ ಮಾಡಿದ್ದರಿಂದಲೇ ಅವರನ್ನು 2023ರಲ್ಲಿ ಸೋಲಿಸಿ ನಮ್ಮನ್ನು 140ಕ್ಕೂ ಹೆಚ್ಚು ಸೀಟುಗಳಿಂದ ಗೆಲ್ಲಿಸಿ ಅಧಿಕಾರದಲ್ಲಿ ಕೂರಿಸಿದ್ದು ಎಂದರು. ಗ್ಲೋಬಲ್ ಸಿಟಿ ಬೆಂಗಳೂರನ್ನು ಕಾಪಾಡಲು ಮಾಡಬೇಕಾದ ಕೆಲಸ ಮಾಡುತ್ತೇವೆ ಎಂದರು.
ಪ್ರದೀಪ್ ಈಶ್ವರ್-ಪ್ರತಾಪ್ ಸಿಂಹ ನಡುವೆ ವೈಯಕ್ತಿಕ ಟೀಕೆ ಬಗ್ಗೆ ಕೇಳಿದಾಗ ಅವರ ಮಧ್ಯೆ ನಾನು ಮಧ್ಯೆಪ್ರವೇಶಿಸುವುದಿಲ್ಲ, ನಾನು ಏನಿದ್ದರೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇನೆ ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿಗೆ ಖಡಕ್ ಟಾಂಗ್
ಇನ್ನು ಜನರ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಳ್ಳಲು, ಜನರಿಗೆ ನಾಗರಿಕ ಸೌಲಭ್ಯ, ಬ್ಯಾಂಕ್ ಸಾಲ ಸಿಗಲು ಎ ಖಾತಾ, ಬಿ ಖಾತಾಗಳನ್ನು ನೀಡುತ್ತಿದ್ದೇವೆ. ನಮ್ಮ ಕೆಲಸಗಳಿಗೆ ಪ್ರಶಂಸೆ ಸಿಕ್ಕಿ ಸಾವಿರಾರು ಜನರು ಅರ್ಜಿ ಹಾಕುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜನರ ಆಸ್ತಿಗಳಿಗೆ ಸ್ಕಾನ್ ಮಾಡಿ ಖಾತೆ ಮಾಡಿ ಕೊಡಲು ಸಾಧ್ಯವಾಗಲಿಲ್ಲ, ಅವರಿಗೆ ಈ ಆಲೋಚನೆಗಳೇ ಬಂದಿಲ್ಲ ಎಂದರು.
ಪವರ್ ಅನ್ನೋದು ಬಿಜೆಪಿಯವ್ರ ಹಣೆಲಿ ಬರೆದಿಲ್ಲ
ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ,ಪವರ್ ಅನ್ನೋದು ಬಿಜೆಪಿಯವ್ರ ಹಣೆಲಿ ಬರೆದಿಲ್ಲ, ಈಗ ಎಲೆಕ್ಷನ್ ಗೆ ನಿಲ್ಲೋದಿಲ್ಲಾ ಎಂದು ಘೋಷಿಸಲಿ ನೋಡೋಣ ಎಂದರು.
Advertisement