

ಹಾಸನ: ಕೆಲವೇ ದಿನಗಳಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಹಲವು ಮಹಿಳೆಯಿಂದ ಲಕ್ಷಾಂತರ ಹಣ ಪಡೆದು ಸುಮಾರು ರೂ. 3 ಕೋಟಿಗೂ ಅಧಿಕ ವಂಚನೆ ಮಾಡಿದ ಮಹಿಳೆಯನ್ನು ಜನ ಅಟ್ಟಾಡಿಸಿ ಹೊಡೆದಿರುವ ಘಟನೆ ಹಾಸನದ ಅರಳೇಪೇಟೆಯಲ್ಲಿ ನಡೆದಿದೆ.
ಟೈಲರ್ ಶಾಪ್ ನಡೆಸುತ್ತಿದ್ದ ಮಹಿಳೆ ಹೇಮಾವತಿ ಎಂಬಾಕೆ, ತನ್ನ ಮಗಳನ್ನು ವಿದೇಶದಲ್ಲಿ ಎಮ್ ಎಸ್ ಓದಿಸಬೇಕೆಂದೂ, ಕೋಟಿ ರೂ.ಗಳ ಮನೆ ಖರೀದಿಸಿದ್ದೇನೆಂದು ಹೇಳಿ ಹಣ ಕೇಳುತ್ತಿದ್ದಳು. ಅಲ್ಲದೇ ಕೊಡಚಾದ್ರಿ ಚಿಟ್ಸ್ನಲ್ಲಿ 1 ಕೋಟಿ ರೂ.ಗಳಿಗೂ ಅಧಿಕ ಚೀಟಿ ಹಾಕಿದ್ದೇನೆ, ಇದರಿಂದ ಕೆಲವೇ ತಿಂಗಳುಗಳಲ್ಲಿ ದುಪ್ಪಟ್ಟು ಹಣ ಬರಲಿದೆ ಎಂದು ನಕಲಿ ಸ್ಲಿಪ್ ತೋರಿಸಿ ಪರಿಚಯದ ಮಹಿಳೆಯರ ಬಳಿ ಸಾಲ ಕೇಳುತ್ತಿದ್ದಳು.
ಹೇಮಾವತಿಯ ಬಣ್ಣ ಬಣ್ಣದ ಮಾತುಗಳಿಂದ ಮರುಳಾಗಿದ್ದ ಮಹಿಳೆಯರು ತಮ್ಮ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ಹಣವನ್ನು ಆಕೆಗೆ ನೀಡಿದ್ದರು ಎನ್ನಲಾಗಿದೆ.
ಹತ್ತಾರು ವರ್ಷಗಳಿಂದ ಡ್ರೆಸ್ ಶಾಪ್ ನಡೆಸುತ್ತಿದ್ದ ಹೇಮಾವತಿಯು ತನ್ನ ನಿತ್ಯ ಗ್ರಾಹಕರನ್ನೇ ಗುರಿಯಾಗಿಸಿಕೊಂಡಿದ್ದರು. ಇನ್ನೂ ಓರ್ವ ಮಹಿಳೆಯಿಂದಲೇ 45 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿರುವುದಾಗಿ ತಿಳಿದುಬಂದಿದೆ.
ವಂಚನೆಗೆ ಪತಿ ಸಾಥ್: ಹೆಂಡತಿ ವಂಚನೆಗೆ ಪತಿ ವಿರೂಪಾಕ್ಷಪ್ಪ ಸಾಥ್ ನೀಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ ವಂಚನೆಗೊಳಗಾದ ಜನ ಮಹಿಳೆಯನ್ನು ರಸ್ತೆಯಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement