
ಸಾರ್ವಜನಿಕ ಅಥವಾ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಇಂದು ತಡೆ ನೀಡಿದ್ದು RSSಗೆ ಅಂಕುಶ ಹಾಕಬೇಕೆನ್ನುವ ಕಾಂಗ್ರೆಸ್ ಸರ್ಕಾರದ ತೀರ್ಮಾನಕ್ಕೆ ಭಾರೀ ಹಿನ್ನಡೆಯಾಗಿದೆ. ಪುನಶ್ಚೇತನ ಸೇವಾ ಸಂಸ್ಥೆ ಎಂಬ ಸಂಘಟನೆಯು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಈ ನಿರ್ಧಾರವು ನಾಗರಿಕರ ಸಭೆ ಸೇರುವ ಮತ್ತು ಸಂಘ ಕಟ್ಟುವ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದೆ ಎಂದು ವಾದಿಸಿತು. ಈ ವಿಷಯವನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪೀಠ ಸರ್ಕಾರಿ ನಿರ್ದೇಶನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ನಿಗದಿಪಡಿಸಿದರು. ಇನ್ನು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ಈ ತಡೆಯಾಜ್ಞೆ ನೀಡಿದ್ದು ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಬೆಂಗಳೂರಿನ RT ನಗರದಲ್ಲಿ ಬ್ರೆಜಿಲ್‌ನ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಅಕ್ಟೋಬರ್ 17 ರಂದು ನಡೆದ ಘಟನೆಯನ್ನು ಅಕ್ಟೋಬರ್ 25 ರಂದು ಪೊಲೀಸರಿಗೆ ವರದಿ ಮಾಡಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದರು. ಬಂಧಿತ ಆರೋಪಿಯನ್ನು ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿ ಕುಮಾರ್ ರಾವ್ ಪವಾರ್ ಎಂದು ಗುರುತಿಸಲಾಗಿದ್ದು ಆತ ಪಾರ್ಟ್ ಟೈಮ್ ನಲ್ಲಿ ಡೆಲಿವರಿ ಬಾಯಿ ಆಗಿ ಕೆಲಸ ಮಾಡುತ್ತಿದ್ದನು. ಈ ಬಗ್ಗೆ ಉತ್ತರ ವಿಭಾಗ ಡಿಸಿಪಿ ನೇಮಗೌಡ ಮಾಹಿತಿ ನೀಡಿದರು. ಸಂತ್ರಸ್ತೆ ಉದ್ಯೋಗದಾತರು ಒದಗಿಸಿದ ಫ್ಲಾಟ್‌ನಲ್ಲಿ ಇತರ ಇಬ್ಬರು ವಿದೇಶಿ ಮಾಡೆಲ್‌ಗಳೊಂದಿಗೆ ವಾಸಿಸುತ್ತಿದ್ದಾಳೆ. ಪುಡ್ ಡೆಲಿವರಿ ಮಾಡಲು ಬಂದ ಆರೋಪಿಯು ಅವಳನ್ನು ಲೈಂಗಿಕವಾಗಿ ಅನುಚಿತವಾಗಿ ಸ್ಪರ್ಶಿಸಿದನೆಂದು ವರದಿಯಾಗಿದೆ. ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿ, ದೃಢೀಕರಣದ ನಂತರವೇ ಉದ್ಯೋಗದಾತರು ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಕರ್ನಾಟಕದ 80 ಸಾವಿರಕ್ಕೂ ಹೆಚ್ಚು ಪೇದೆಗಳು ಐದು ದಶಕಗಳಿಗೂ ಹೆಚ್ಚು ಕಾಲದಿಂದ ಸ್ಲಚ್ ಟೋಪಿಗಳನ್ನು ಧರಿಸುತ್ತಿದ್ದು ಈಗ ಅದನ್ನು ನೇವಿ ಬ್ಲೂ ಪೀಕ್ ಕ್ಯಾಪ್‌ಗಳಿಗೆ ಬದಲಿಸಲಾಗಿದೆ. ಇಂದು ವಿಧಾನಸೌಧದಲ್ಲಿ ಕೆಲವು ಪೇದೆಗಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನೇವಿ ಬ್ಲೂ ಪೀಕ್ ಕ್ಯಾಪ್‌ಗಳನ್ನು ಅಧಿಕೃತವಾಗಿ ವಿತರಿಸಿದರು. ಕರ್ನಾಟಕದ ನಾಗರಿಕ ಪೇದೆಗಳಲ್ಲಿ ಶೇಕಡಾ 25ರಷ್ಟು ಮಹಿಳೆಯರು ಖಾಕಿ ಬೆರೆಟ್ ಕ್ಯಾಪ್‌ಗಳನ್ನು ಧರಿಸುತ್ತಾರೆ. ಲಿಂಗ ಸಮಾನತೆಯ ಸಂಕೇತ ನಡೆಯಾಗಿ ಅವರು ಕೂಡ ಪುರುಷ ಸಹೋದ್ಯೋಗಿಗಳಂತೆ ನೇವಿ ಬ್ಲೂ ಪೀಕ್ ಕ್ಯಾಪ್‌ಗಳನ್ನು ಧರಿಸಲಿದ್ದಾರೆ. ನಂತರ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಯುವ ಶಕ್ತಿ, ಯುವಜನರ ಚೈತನ್ಯ ಮತ್ತು ಸಾಮರ್ಥ್ಯಗಳು ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಕಟಿಬದ್ಧ ನಿಲುವು ತಳೆಯಬೇಕು ಎಂದು ಕರೆ ನೀಡಿದರು. ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ, ಇದು ಪೊಲೀಸ್ ಇಲಾಖೆಯ ಗುರಿಯೂ ಆಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ನಗರದಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಯನ್ನು ಕೈಬಿಡುವಂತೆ ಮನವಿ ಮಾಡಿದರು. ಇದೇ ವೇಳೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ ಮತ್ತು ಉಪನಗರ ರೈಲು ಜಾಲಗಳ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು. ಡಿಕೆ ಶಿವಕುಮಾರ್ ಜೊತೆಗಿನ ಒಂದು ಗಂಟೆಯ ಸಭೆಯು ಬಹಳ ಫಲಪ್ರದ ಎಂದು ತೇಜಸ್ವಿ ಸೂರ್ಯ ಹೇಳಿದರು. ಬೆಂಗಳೂರು ಟ್ರಾಫಿಕ್, ಗುಂಡಿ ಸಮಸ್ಯೆ ಬಗ್ಗೆ ವಿಸ್ತೃತವಾದ ಚರ್ಚೆ ಆಯ್ತು. ನಾನು ಹೇಳಿದ್ದನ್ನು ಶಾಂತವಾಗಿ ಕೇಳಿಸಿಕೊಂಡರು. ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು ಎಂದರು. ನಂತರ ಮಾತನಾಡಿದ ಡಿಕೆ ಶಿವಕುಮಾರ್, ತೇಜಸ್ವಿ ಸೂರ್ಯ ಕೆಲವೊಂದಿಷ್ಟು ಸಲಹೆ ಕೊಟ್ಟಿದ್ದಾರೆ. ಟನಲ್ ರಸ್ತೆ ಬದಲಿಗೆ ಮೆಟ್ರೋ ಬರಬೇಕು ಎಂದು ಹೇಳಿದರು. ಅದಕ್ಕೆ ನೀನು ಹೇಳಿದಂತೆ ಎಲ್ಲಾ ಆಗಲ್ಲ ಎಂದು ಹೇಳಿದೆ. ಇನ್ನು ದೆಹಲಿಯಿಂದ ಎಷ್ಟು ಹಣ ಬಂದಿದೆ ಎಂದು ಕೇಳಿದೆ. ನಾನು ಕೂಡ ಪ್ರಧಾನಿಯನ್ನು ಭೇಟಿ ಮಾಡಲು ಬರುತ್ತೇನೆ. ಹಣ ಕೊಡಿಸಿ ಎಂದು ಕೇಳಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
Advertisement