

ಬೆಂಗಳೂರು: ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಸಫಾರಿ ಟ್ರಿಪ್ ಖಡಿತಕ್ಕೆ ಸಚಿವ ಈಶ್ವರ್ ಖಂಡ್ರೆ ಮಹತ್ವದ ಆದೇಶ ನೀಡಿದ್ದಾರೆ.
ಹೌದು.. ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿನ ಸಫಾರಿಯ ಟ್ರಿಪ್ ಅನ್ನು ಕಡಿತಗೊಳಿಸಿ ಆದೇಶಿಸಲಾಗಿದೆ.
ವನ್ಯಜೀವಿ ಸಂಘರ್ಷ ಹೆಚ್ಚಳ ಹಾಗೂ ರೈತ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಬಂಡೀಪುರ ಸಫಾರಿಯಲ್ಲಿ ಕೊನೆಯ 1 ಟ್ರಿಪ್ ಅನ್ನು ಕಡಿತಗೊಳಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮಹತ್ವದ ಆದೇಶ ಹೊರಡಿಸಿದ್ದಾರೆ.
ವನ್ಯ ಜೀವಿಗಳಿಗೆ ತೊಂದರೆ: ಸ್ಥಳೀಯ ರೈತರ ಮನವಿ
ಇನ್ನು ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಫಾರಿಯ ಟ್ರಿಪ್ ಸಂಖ್ಯೆ ಕೂಡ ಹೆಚ್ಚಳ ಮಾಡಲಾಗಿದೆ. ರಾತ್ರಿ 6 ಗಂಟೆ ನಂತರವೂ ಕಾಡಿನಲ್ಲಿ ಸಫಾರಿ ವಾಹನಗಳು ಸಂಚರಿಸುತ್ತಿವೆ.
ವಾಹನದ ಬೆಳಕು ಮತ್ತು ಶಬ್ಧದಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡುತ್ತಿವೆ ಎಂದು ವಿವಿಧ ರೈತ ಸಂಘಟನೆಗಳು ಆರೋಪಿಸಿದ್ದಲ್ಲದೇ ಕೂಡಲೇ ಸಫಾರಿ ನಿಲ್ಲಿಸುವಂತೆ ಮನವಿ ಮಾಡಿದ್ದರು.
ಆದರೆ, ಸಫಾರಿಯು ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಪರಿಸರ ಆಸಕ್ತರಿಗೆ ಶಿಕ್ಷಣವೂ ಆಗಿದೆ. ಹಲವರಿಗೆ ಜೀವನೋಪಾಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಅ.28ರಿಂದಲೇ ಹಾಲಿ ಇರುವ ಸಫಾರಿಯ ಟ್ರಿಪ್ಗಳ ಪೈಕಿ 1 ಟ್ರಿಪ್ ಅನ್ನು ಕಡಿತಗೊಳಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಫಾರಿ ಟ್ರಿಪ್ ವಿವರ
ಬಂಡೀಪುರದಲ್ಲಿ 5 ಜಿಪ್ಸಿ, 5 ಕ್ಯಾಂಪರ್ ಹಾಗೂ 7 ಮಿನಿ ಬಸ್ ಸೇರಿದಂತೆ ಒಟ್ಟು 17 ವಾಹನಗಳು ಸಫಾರಿಗೆ ತೆರಳುತ್ತಿವೆ. ಪ್ರತಿ ದಿನ ಬೆಳಗ್ಗೆ 6:30 ಮತ್ತು 8 ಗಂಟೆ ಸೇರಿ 2 ಟ್ರಿಪ್ ಹಾಗೂ ಸಂಜೆ 2:30, 3:30 ಮತ್ತು 5:00 ಗಂಟೆಗೆ ಸೇರಿ 3 ಟ್ರಪ್ ಸೇರಿ ಒಟ್ಟು 5 ಟ್ರಿಪ್ಗಳು ಸಫಾರಿಗೆ ವಾಹನಗಳು ತೆರಳುತ್ತಿವೆ. ಇದರ ಪೈಕಿ 5 ಗಂಟೆಗೆ ತೆರಳುವ ಕೊನೆಯ ಟ್ರಿಪ್ ಅನ್ನು ಕಡಿತಗೊಳಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ.
ಈ ಪೈಕಿ ಜಂಗಲ್ ಲಾಡ್ಜ್ನಿಂದಲೂ 10 ವಾಹನಗಳು ಸಫಾರಿಗೆ ತೆರಳುತ್ತಿವೆ. ಅಂತೆಯೇ ಬಹು ಬೇಡಿಕೆ ಸಮಯವಾದ ಸಂಜೆ 5ರ ನಂತರ ಹೊರಡುವ ಸಫಾರಿ ರದ್ದಾಗಲಿದೆ. ಈ ಕುರಿತು ಬಂಡೀಪುರ ಸಿಎಫ್ಒ ಪ್ರಭಾಕರನ್ ಪ್ರತಿಕ್ರಿಯಿಸಿ, ಆದೇಶದ ಬಗ್ಗೆ ತಿಳಿದಿದೆ, ಸಿಸಿಎಫ್ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement