

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ (SC) ಒಳ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ರಾಜ್ಯ ಸರ್ಕಾರ ಬಿಲ್ ನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಗುರುವಾರ ಹೇಳಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ 101 ಪರಿಶಿಷ್ಟ ಜಾತಿಗಳಿಗೆ ನಿಗದಿಪಡಿಸಿದ ಶೇ. 17 ರಷ್ಟು ಮೀಸಲಾತಿಯನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ಶಿಕ್ಷಣ, ಉದ್ಯೋಗದಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿದೆ.
ಪರಿಶಿಷ್ಟ ಜಾತಿಯಲ್ಲಿ ಬರುವ ಬಲಗೈ ಸಮುದಾಯಗಳಿಗೆ ಪ್ರವರ್ಗ ಎನಲ್ಲಿ ಶೇ. 6, ಎಡಗೈ ಸಮುದಾಯಗಳಿಗೆ ಪ್ರವರ್ಗ ಬಿನಲ್ಲಿ ಶೇ. 6 ಮತ್ತು ಭೋವಿ, ಲಮಾಣಿ, ಕೊರಮ, ಕೊರಚ ಸೇರಿದಂತೆ ಇತರ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಪ್ರವರ್ಗ ಸಿನಲ್ಲಿ ಶೇ. 5 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿದೆ.
ಒಳಮೀಸಲಾತಿ ಕುರಿತು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಹೆಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ ಮತ್ತಿತರೊಂದಿಗೆ ಚರ್ಚೆ ನಡೆಸಿದ ನಂತರ ವಿಧೇಯಕ ಮಂಡನೆ ಮಾಡಬೇಕಿದ್ದರೆ ಚರ್ಚಿಸಿ ಸಂಪುಟದ ಮುಂದೆ ಮಂಡಿಸಿ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಬಿಲ್ ಕುರಿತು ಚರ್ಚಿಸಲು ಸಾಧ್ಯವಾಗಲಿಲ್ಲ. ಹಾಗಾಗೀ ಮುಂದಿನ ಸಚಿವ ಸಂಪುಟ ಸಭೆಗೆ ಮುಂದೂಡಲಾಯಿತು ಎಂದು ಎಚ್. ಕೆ. ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆರಡು ದಿನಗಳಲ್ಲಿ ಸಭೆ ನಡೆಸಿ ಮುಂದಿನ ಸಚಿವ ಸಂಪುಟದ ಮುಂದೆ ಮಸೂದೆ ಮಂಡಿಸಲು ಪ್ರಯತ್ನಿಸಲು ನಿರ್ಧರಿಸಿದ್ದೇವೆ. ಇನ್ನು ಮುಂದೆ ಪರಿಶಿಷ್ಟ ಜಾತಿಯಲ್ಲಿ ಮೀಸಲಾತಿಯಲ್ಲಿ ಪುನರ್‌ರಚನೆ ಇರುವುದಿಲ್ಲ ಮತ್ತು ಸರ್ಕಾರ ತೆಗೆದುಕೊಂಡ ನಿರ್ಧಾರದ ಆಧಾರದ ಮೇಲೆ ಮಸೂದೆಯನ್ನು ಸಿದ್ಧಪಡಿಸಲಾಗುವುದು ಎಂದು ಸ್ಪಷ್ಪಪಡಿಸಿದರು.
Advertisement