

ಬೆಂಗಳೂರು: ಎಂಜಿನಿಯರ್ ಕೆ. ಅರವಿಂದ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕ್ರಿಮಿನಲ್ ತನಿಖೆಗೆ ಸಹಕರಿಸುವಂತೆ ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಎಂಡಿ ಭವಿಶ್ ಅಗರ್ವಾಲ್ ಮತ್ತು ಹೋಮೋಲೊಗೇಶನ್ ಎಂಜಿನಿಯರಿಂಗ್ ಮುಖ್ಯಸ್ಥ ಸುಬ್ರತ್ ಕುಮಾರ್ ದಾಸ್ ಅವರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ಅರ್ಜಿದಾರರಿಗೆ ನೀಡಲಾದ ಮಧ್ಯಂತರ ರಕ್ಷಣೆಯನ್ನು ನವೆಂಬರ್ 17 ರವರೆಗೆ ವಿಸ್ತರಿಸಿ, ತನಿಖೆಯ ನೆಪದಲ್ಲಿ ಕಿರುಕುಳ ನೀಡದಂತೆ ಪೊಲೀಸರಿಗೆ ನಿರ್ದೇಶನ ನೀಡಿದರು.
ಅರವಿಂದ್ ಅವರ ಸಹೋದರ ಅಶ್ವಿನ್ ಕಣ್ಣನ್ ಅವರು ಸುಬ್ರಹ್ಮಣ್ಯಪುರ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 108ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅರ್ಜಿದಾರರು ಕೆಲಸದ ಸ್ಥಳದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ತನ್ನ ವೇತನ ಮತ್ತು ಇತರೆ ಭತ್ಯೆಯನ್ನು ತನಗೆ ನೀಡದೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂತ್ರಸ್ತ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಅರ್ಜಿದಾರರು ಡೆತ್‌ನೋಟ್‌ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದರು. ಅದನ್ನು ಮೃತರ ಬದಲು ದೂರುದಾರರು ರಚಿಸಿರಬಹುದು ಎಂದು ವಾದಿಸಿದರು.
ಅರವಿಂದ್ ಅವರ ಸಾವಿಗೆ ಸಂಬಂಧಿಸಿದ ಚಿತ್ರಗಳು ಮತ್ತು ಸಂದರ್ಶನಗಳ ಪ್ರಸರಣವು ಸಂಸ್ಥೆಯ ಖ್ಯಾತಿಗೆ ಹಾನಿಯುಂಟು ಮಾಡಿದೆ. ಅದರ ಷೇರು ಬೆಲೆಯ ಮೇಲೆ ಪರಿಣಾಮ ಬೀರಿದೆ ಮತ್ತು ಉದ್ಯೋಗಿಗಳ ನಿರ್ಗಮನಕ್ಕೆ ಕಾರಣವಾಗಿದೆ ಎಂದಿದ್ದಾರೆ.
ದೂರುದಾರರ ಪರ ವಕೀಲರು ಓಲಾ ಎಲೆಕ್ಟ್ರಿಕ್ ಅನ್ನು 'ಈಸ್ಟ್ ಇಂಡಿಯಾ ಕಂಪನಿ'ಗೆ ಹೋಲುತ್ತದೆ ಎಂದು ಬಣ್ಣಿಸಿ, ಕಂಪನಿಯ ಅಧಿಕಾರಿಗಳು ತಮ್ಮ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪೊಲೀಸರು ತನಿಖೆಗಾಗಿ ನೋಟಿಸ್ ನೀಡಿದ್ದರೂ, ಅರ್ಜಿದಾರರು ವಿಚಾರಣೆಗೆ ಹಾಜರಾಗುವ ಬದಲು ಪತ್ರಗಳ ಮೂಲಕ ಮಾತ್ರ ಉತ್ತರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಬಳಿಕ ತನಿಖೆಗೆ ಸಹಕರಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ಸೂಚಿಸಿತು.
ಅರ್ಜಿದಾರರ ವಿರುದ್ಧ ಸಲ್ಲಿಸಲಾದ ಯಾವುದೇ ಅಂತಿಮ ವರದಿಯನ್ನು ಸೂಕ್ತ ಸಮಯದಲ್ಲಿ ಪ್ರಶ್ನಿಸಬಹುದು ಎಂದು ನ್ಯಾಯಾಲಯವು ಹೇಳಿದೆ.
Advertisement