
ಬೆಂಗಳೂರು: ಪ್ರತಿಷ್ಠಿತ ರಾಷ್ಟ್ರೀಯ ಕ್ವಾಂಟಮ್ ಮಿಷನ್ - NQM ನಲ್ಲಿ ರಾಜ್ಯದ ಭಾಗವಹಿಸುವಿಕೆಯನ್ನು ಸಂಯೋಜಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಐಎಎಸ್ ಅಧಿಕಾರಿ ಏಕರೂಪ್ ಕೌರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದಾರೆ.
ಇದರೊಂದಿಗೆ ದೇಶದ ಕ್ವಾಂಟಮ್ ಭವಿಷ್ಯವನ್ನು ರೂಪಿಸುವಲ್ಲಿ ಕರ್ನಾಟಕದ ಪಾತ್ರವನ್ನು ಖಚಿತಪಡಿಸಿಕೊಳ್ಳುವಲ್ಲಿ ಏಕರೂಪ್ ಕೌರ್ ಅವರು ಐಐಎಸ್'ಸಿಯೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ.
ಆಗಸ್ಟ್ 11, 2025 ರಂದು ನಿಯಮ 377 ರ ಅಡಿಯಲ್ಲಿ ಲೋಕಸಭೆಯಲ್ಲಿ ಈ ವಿಚಾರದ ಕುರಿತು ಕುಮಾರ್ ನಾಯಕ್ ಅವರು ಧ್ವನಿ ಎತ್ತಿದ್ದರು.
ಭಾರತದಲ್ಲಿ ಕ್ವಾಂಟಮ್ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM)ನಲ್ಲಿ ಕರ್ನಾಟಕದ ಒಳಗೊಳ್ಳುವಿಕೆಯ ಅಗತ್ಯವನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಯೋಗದ ಪ್ರಯತ್ನಗಳ ಮಹತ್ವವನ್ನು ಕುಮಾರ್ ನಾಯಕ್ ಅವರು ಒತ್ತಿ ಹೇಳಿದ್ದರು.
ಇದಕ್ಕೆ ಉತ್ತರಿಸಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ರಾಜ್ಯದ ಪ್ರತಿನಿಧಿಗಳು ಮಿಷನ್‌ನ ಉನ್ನತ ಮಟ್ಟದ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಇದರ ಬೆನ್ನಲ್ಲೇ ಜಿತೇಂದ್ರ ಸಿಂಗ್ ಅವರು ಕರ್ನಾಟಕ ಸರ್ಕಾರದ ಮಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು, NQMನ HGB - ಹಬ್ ಆಡಳಿತ ಮಂಡಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಹಿರಿಯ ಅಧಿಕಾರಿಯನ್ನು ನೇಮಕ ಮಾಡುವಂತೆ ಸೂಚನೆ ನೀಡಿದ್ದರು. ಸೂಚನೆ ಬೆನ್ನಲ್ಲೇ ಏಕರೂಪ್ ಕೌರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರ್ ನಾಯಕ್ ಅವರು, ಕೇಂದ್ರ ಸರ್ಕಾರದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇನೆ. ರಾಜ್ಯಕ್ಕೆ ಅವಕಾಶದ ಬಾಗಿಲು ತೆರೆದಿದ್ದು, ಕರ್ನಾಟಕವು ಭಾರತದ ಕ್ವಾಂಟಮ್ ಭವಿಷ್ಯವನ್ನು ಸೃಷ್ಟಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕ್ವಾಂಟಮ್ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM)ನ್ನು ಆರಂಭಿಸಲಾಗಿದ್ದು, ಕ್ವಾಂಟಮ್ ಕಂಪ್ಯೂಟಿಂಗ್, ಸಂವಹನ ಮತ್ತು ಸಂವೇದನಾ ತಂತ್ರಜ್ಞಾನಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಯೋಜನೆಯನ್ನು ರೂ.6,003 ಕೋಟಿಗಳ ಬಜೆಟ್‌ನೊಂದಿಗೆ 2023 ರಿಂದ 2031 ರವರೆಗೆ ಜಾರಿಗೆ ತರಲಾಗಿದೆ.
ಕ್ವಾಂಟಮ್ ತಂತ್ರಜ್ಞಾನಗಳನ್ನು ಬಳಸಿ ದೂರಸಂಪರ್ಕ, ರಕ್ಷಣೆ, ಹಣಕಾಸು ಮತ್ತು ಆರೋಗ್ಯದಂತಹ ಕ್ಷೇತ್ರಗಳನ್ನು ಪರಿವರ್ತಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
Advertisement