
ಮಂಗಳೂರು: ಧರ್ಮಸ್ಥಳ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದ್ದು, ಹತ್ಯೆಗೀಡಾದವರ ಸಮಾಧಿ ತೋರಿಸಲು ಸಿದ್ಧ ಎಂದು ಧರ್ಮಸ್ಥಳ ಗ್ರಾಮಸ್ಥರ ಗುಂಪೊಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ಪತ್ರ ಬರೆದಿದೆ.
ಗ್ರಾಮಸ್ಥರ ಪರವಾಗಿ ಧರ್ಮಸ್ಥಳ ನಿವಾಸಿ ತುಕಾರಾಮ ಗೌಡ ಎಂಬುವವರು ಎಸ್ಐಟಿಗೆ ಪತ್ರ ಸಲ್ಲಿಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನಾವು ಭಯದಲ್ಲಿ ಬದುಕುವಂತಾಗಿದೆ. ಆದರೆ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಸ್ಐಟಿ ರಚಿಸಿರುವುದು ನಮ್ಮ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಮಾಧ್ಯಮಗಳಲ್ಲಿ ತೋರಿಸಲಾಗಿರುವ ವ್ಯಕ್ತಿಯನ್ನು ನಾವು ಗುರ್ತಿಸಿದ್ದೇವೆ. ಆತ ವಿವಿಧ ಸ್ಥಳಗಳಿಗೆ ಶವಗಳನ್ನು ಸಾಗಿಸುತ್ತಿರುವುದು ಹಾಗೂ ಹೂಳುತ್ತಿರುವುದನ್ನು ನೋಡಿದ್ದೇವೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಕಾರ್ಯಗಳು ರಹಸ್ಯವಾಗಿ ನಡೆದರೂ, ಹಳ್ಳಿ ಪರಿಸರದಲ್ಲಿ ಈ ವಿಷಯಗಳು ಬಹಿರಂಗವಾಗುವುದು ಸಾಮಾನ್ಯ. ಅಸ್ಥಿಪಂಜರಗಳನ್ನು ಹೂಳಿರುವುದಾಗಿ ದೂರು-ಸಾಕ್ಷಿದಾರ ವ್ಯಕ್ತಿ ಹೇಳಿದ್ದ. ಆದರೆ, ನಂತರ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾನೆಂದು ಮಾಧ್ಯಮಗಳು ವರದಿ ಮಾಡಿದವು. ಆತ ತನ್ನ ಹೇಳಿಕೆಯನ್ನೇಕೆ ಹಿಂತೆಗೆದುಕೊಂಡ ಎಂಬುದು ಗೊಂದಲ ಸೃಷ್ಟಿಸುತ್ತಿದೆ.
ಆ ವ್ಯಕ್ತಿ ಜನಸಂಚಾರ ಕಡಿಮೆ ಇರುವ ಜಾಗಗಳನ್ನು ಆರಿಸಿಕೊಂಡು ಶವಗಳನ್ನು ಹೂಳುತ್ತಿದ್ದ. ಅವನು ಹೇಳಿದ ಸ್ಥಳಗಳಿಗೆ ಹೋಗಿ ಶೋಧ ಕಾರ್ಯ ನಡೆಸಲು ಎಸ್ಐಟಿ ನಾವು ಸಹಕರಿಸುತ್ಯೇವೆ. ಸಮಾಧಿ ಮಾಡಿದ ಸ್ಥಳಗಳನ್ನು ಎಸ್ಐಟಿಗೆ ತೋರಿಸಲು ನಾವು ಸಿದ್ಧರಿದ್ದೇವೆ. ಸತ್ಯ ಮತ್ತು ನ್ಯಾಯಕ್ಕಾಗಿ ಎಸ್ಐಟಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದೇವೆಂದು ಪತ್ರದಲ್ಲಿ ತಿಳಿಸಿದ್ದಾರೆ.
Advertisement