ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಮೇಲೆ ಆರೋಪವಿದೆ, ಹಾಗಾದರೆ ನೀವು ಯಾರ ಪರ?; BJPಗೆ ಸಿದ್ದರಾಮಯ್ಯ ಪ್ರಶ್ನೆ

ಎಸ್ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ ದೇಹಗಳು ಸಿಗದೇ ಹೋದಾಗ ಒತ್ತಾಯಿಸುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಸತ್ಯ ಹೊರಬರಲಿ ಎಂದು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪವಿದೆ. ಹಾಗಾದರೆ ಬಿಜೆಪಿ ಯಾರ ಪರ ಇದ್ದಾರೆ? ಒಂದು ಕಡೆ ವೀರೇಂದ್ರ ಹೆಗ್ಗಡೆಯವರ ಪರ ಎನ್ನುತ್ತಾರೆ, ಮತ್ತೊಂದಡೆ ಸೌಜನ್ಯ ಪರ ಎನ್ನುತ್ತಾರೆ. ನಿಜವಾಗಿಯೂ ನೀವು ಯಾರ ಪರ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮ ಯಾತ್ರೆಯಲ್ಲ, ರಾಜಕೀಯ ಯಾತ್ರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಈಗ ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಎಸ್ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ ದೇಹಗಳು ಸಿಗದೇ ಹೋದಾಗ ಒತ್ತಾಯಿಸುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಸತ್ಯ ಹೊರಬರಲಿ ಎಂದು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ನಮ್ಮ ಮೇಲಿನ ಅನುಮಾನದ ತೂಗುಗತ್ತಿ ನಿವಾರಣೆಯಾಗಬೇಕೆಂದಿದ್ದಾರೆ. ಎಸ್‌ಐಟಿಯು ತನಿಖೆಯನ್ನು ಸ್ವತಂತ್ರವಾಗಿ ಮಾಡುತ್ತಿದ್ದು, ನಾವ್ಯಾರು ಅದರಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸತ್ಯ ಹೊರಬರಬೇಕು.

ವಿರೋಧ ಪಕ್ಷದವರು ಟೀಕೆಯನ್ನು ಮಾಡಲಿ. ಆದರೆ ಎಲ್ಲಾ ವಿಷಯಗಳನ್ನೂ ರಾಜಕೀಯಗೊಳಿಸಲು ಹೋಗಬಾರದು. ಬಿಜೆಪಿಯವರ ಈಗಿನ ಆರೋಪಗಳಲ್ಲಿ ಸತ್ಯವಿಲ್ಲ. ಸೌಜನ್ಯ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದ್ದಾರೆ. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಅವರು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕೆಂದು ಬಿಜೆಪಿ ಹೇಳುತ್ತಿದೆ. ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪವಿದೆ. ಹಾಗಾದರೆ ಬಿಜೆಪಿ ಯಾರ ಪರ ಇದ್ದಾರೆ? ಒಂದು ಕಡೆ ವೀರೇಂದ್ರ ಹೆಗ್ಗಡೆಯವರ ಪರ ಎನ್ನುತ್ತಾರೆ, ಮತ್ತೊಂದಡೆ ಸೌಜನ್ಯ ಪರ ಎನ್ನುತ್ತಾರೆ. ನಿಜವಾಗಿಯೂ ಇವರು ಯಾರ ಪರ?

ಚಿನ್ನಯ್ಯ ಎಂಬ ವ್ಯಕ್ತಿಯನ್ನು ಕರೆತಂದಿರುವುದೇ ಯಾರು ಎಂಬ ಬಗ್ಗೆ ಸದನದಲ್ಲಿ ಚರ್ಚೆಯಾದಾಗ ಅಂದು ಬೇರೆ ರೀತಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಶಾಸಕ ಸುನೀಲ್ ಕುಮಾರ್ ಈಗ ಬೇರೆ ಕತೆ ಹೇಳುತ್ತಿದ್ದಾರೆ. ಹೀಗೆ ದಿನಕ್ಕೊಂದು ಹೇಳಿಕೆ ಕೊಡಬಾರದು. ಅಸತ್ಯದ ಮೇಲೆ ಚರ್ಚೆ ಮಾಡಿದರೆ ಹೀಗೆ ಆಗುವುದು. 12 ವರ್ಷಗಳ ಹಿಂದೆ ಅಪಹರಣವಾಗಿರುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಎಸ್ಐಟಿಗೆ ಮಹಿಳೆಯೊಬ್ಬರು ದೂರ ನೀಡಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆದಾಗ ಏಕೆ ಹೇಳಲಿಲ್ಲ? ಸತ್ಯ ಗೊತ್ತಿದ್ದ ಮೇಲೆ, ಅದನ್ನು ಮುಚ್ಚಿಡುವುದು ಕೂಡ ಅಪರಾಧ. ಸೌಜನ್ಯ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ನಾನು ಅದರ ತೀರ್ಪನ್ನು ನೋಡಿಲ್ಲ. ಈ ಬಗ್ಗೆ ಸೌಜನ್ಯ ತಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು, ನಾವಲ್ಲ ಎಂದು ತಿಳಿಸಿದರು.

CM Siddaramaiah
ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ವಿರುದ್ಧ ಬಿಜೆಪಿ ಪ್ರತಿಭಟನೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com