
ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಮೈಸೂರಿನ ಅಂಬಾವಿಲಾಸ ಅರಮನೆಗೆ ಭೇಟಿ ಕೊಟ್ಟು ವಾಸ್ತುಶಿಲ್ಪ ಸೌಂದರ್ಯ ಸವಿದರು.
ಅರಮನೆಗೆ ಬಂದ ಅವರನ್ನು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮತ್ತು ಕುಟುಂಬದವರು ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಮಗಳು ಇತಿಶ್ರೀ ಮುರ್ಮು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮತ್ತು ಇತರ ಗಣ್ಯರೊಂದಿಗೆ ಅರಮನೆಯಲ್ಲಿ ಸುತ್ತಾಡಿ, ವಿವಿಧ ಭಾಗಗಳನ್ನು ವೀಕ್ಷಿಸಿ ಆನಂದಿಸಿದರು.
ರವಿವರ್ಮ ವರ್ಣಚಿತ್ರಗಳು, ದರ್ಬಾರ್ ಹಾಲ್‌ನ ಗಾಜಿನ ಛಾವಣಿ, ಸೊಗಸಾದ ಪೀಠೋಪಕರಣಗಳ ಸಂಗ್ರಹ ಮತ್ತು ರಾಜಮನೆತನದ ಶಸ್ತ್ರಾಸ್ತ್ರ ಮತ್ತು ಪ್ರಶಸ್ತಿಗಳಿರುವ ಕೋಣೆಯನ್ನು ನೋಡಿ ಪ್ರಭಾವಿತರಾದರು. ಬಳಿಕ ಅಲ್ಲಿಯೇ ಉಪಾಹಾರ ಸವಿದರು.
ರಾಜಮನೆತನದ ಪ್ರಮೋದಾ ದೇವಿ ಒಡೆಯರ್ ಅವರು ರಾಷ್ಟ್ರಪತಿ ಮತ್ತು ಅವರ ನಿಯೋಗಕ್ಕೆ ಸಾಂಪ್ರದಾಯಿಕ ಮೈಸೂರಿನ ವಿಶೇಷ ಭಕ್ಷ್ಯಗಳಾದ ಮಸಾಲೆ ದೋಸೆ, ಮೈಸೂರು ಪಾಕ್ ಜೊತೆಗೆ ಇಡ್ಲಿ–ಸಾಂಬಾರ್, ಶ್ಯಾವಿಗೆ ಉಪ್ಪಿಟ್ಟು, ಸಬ್ಬಕ್ಕಿ ವಡೆ, ಗೋಧಿ ಹಾಲ್ಬಾಯಿ ಮತ್ತು ಬಾದಾಮ್ ಹಲ್ವಾವನ್ನು ಉಣಬಡಿಸಿದರು,
ಜೊತೆಗೆ ಎಳನೀರು, ಕಿವಿ, ಪ್ಲಮ್ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನೂ ನೀಡಲಾಯಿತು. ರಾಷ್ಟ್ರಪತಿಗಳ ಆಹಾರ ಆದ್ಯತೆಗಳಿಗೆ ಅನುಗುಣವಾಗಿ ಈ ಎಲ್ಲವನ್ನೂ ವಿಶೇಷವಾಗಿ ಸಿದ್ಧಪಡಿಸಲಾಗಿತ್ತು.
Advertisement