
ಬೆಂಗಳೂರು: ಎಂಬಿಬಿಎಸ್ ವ್ಯಾಸಂಗ ಮಾಡಲು ಬಯಸುವವರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಒಳ್ಳೆಯ ಸುದ್ದಿ ನೀಡಿದೆ. ಕರ್ನಾಟಕಕ್ಕೆ ಹೆಚ್ಚುವರಿ 400 ವೈದ್ಯಕೀಯ ಸೀಟುಗಳು ಲಭ್ಯವಾಗಿದ್ದು, ಎರಡನೇ ಸುತ್ತಿನ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಗಣಿಸಿದೆ.
ನೀಟ್ ಫಲಿತಾಂಶದ ನಂತರ ಪ್ರಕಟಿಸಿದ್ದ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ 9,263 ಸೀಟುಗಳು ಲಭ್ಯವಿದ್ದವು. ರಾಜ್ಯದ ಎಂಟು ವೈದ್ಯಕೀಯ ಕಾಲೇಜುಗಳಲ್ಲಿ ತಲಾ 50 ಸೀಟುಗಳ ಹೆಚ್ಚಳಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮತಿ ನೀಡಿದ್ದು, ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ 9,663ಕ್ಕೆ ಏರಿಕೆಯಾಗಿದೆ.
ರಾಜ್ಯ ಸರ್ಕಾರ 15 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100 ಹೆಚ್ಚುವರಿ ಸೀಟುಗಳಿಗಾಗಿ ಮನವಿ ಮಾಡಿತ್ತು. ಆದರೆ ಮೂಲಸೌಕರ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಎನ್‌ಎಂಸಿ ವಿನಂತಿಯನ್ನು ತಿರಸ್ಕರಿಸಿತ್ತು. ಎನ್‌ಎಂಸಿ ಬೆಳಗಾವಿ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಮೈಸೂರು, ರಾಯಚೂರು, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಗಳ ಸೀಟು ಹೆಚ್ಚಳ ಮಾಡಲು ಸಮ್ಮತಿಸಿದೆ.
ಬೀದರ, ಚಾಮರಾಜನಗರ, ಗದಗ, ಕಾರವಾರ, ಕೊಪ್ಪಳ, ಮಂಡ್ಯ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸೀಟು ಹೆಚ್ಚಳದ ಮನವಿಯನ್ನು ತಿರಸ್ಕರಿಸಿದೆ.
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಲ್ಲಿ ತಲಾ 100 ಸೀಟುಗಳ ಹೆಚ್ಚಳಕ್ಕೆ ಮನವಿ ಮಾಡಲಾಗಿತ್ತು. ತಲಾ 50 ಸೀಟುಗಳನ್ನು ಅನುಮೋದಿಸಿದೆ. ಹುಬ್ಬಳ್ಳಿಯ ಜೆಜಿಎಂಎಂ ಕಾಲೇಜಿಗೂ (ಡೀಮ್ಡ್) 50 ಸೀಟು ಹೆಚ್ಚಿಸಲಾಗಿದೆ.
ಆದರೆ ಈ ಸೀಟುಗಳು ಹೊಸ ಆಯ್ಕೆ ಪ್ರವೇಶಕ್ಕೆ ಲಭ್ಯವಿರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೆಇಎ ಎರಡನೇ ಸುತ್ತಿನ ತಾತ್ಕಾಲಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 12 ರಂದು ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ತನ್ನ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಪೂರ್ಣಗೊಳಿಸಲು ಕಾಯುತ್ತಿದೆ.
Advertisement