News Headlines 03-09-25 | Mysuru Dasara ಉದ್ಘಾಟನೆಗೆ ಬಾನು ಮುಷ್ತಾಕ್‍ಗೆ ಅಧಿಕೃತ ಆಹ್ವಾನ; Rape case: ಮುನಿರತ್ನಗೆ ಕ್ಲೀನ್ ಚೀಟ್; ಗ್ರಾ.ಪಂ ಅಧ್ಯಕ್ಷನ ಬರ್ಬರ ಕೊಲೆ!

News Headlines 03-09-25 | Mysuru Dasara ಉದ್ಘಾಟನೆಗೆ ಬಾನು ಮುಷ್ತಾಕ್‍ಗೆ ಅಧಿಕೃತ ಆಹ್ವಾನ; Rape case: ಮುನಿರತ್ನಗೆ ಕ್ಲೀನ್ ಚೀಟ್; ಗ್ರಾ.ಪಂ ಅಧ್ಯಕ್ಷನ ಬರ್ಬರ ಕೊಲೆ!

1. ಮೈಸೂರು ದಸರಾ ಉದ್ಘಾಟನೆಗೆ ಸರ್ಕಾರದಿಂದ ಬಾನು ಮುಷ್ತಾಕ್‍ಗೆ ಅಧಿಕೃತ ಆಹ್ವಾನ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆ ಸೆಪ್ಟೆಂಬರ್ 22ರಂದು ನಡೆಯಲಿರುವ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾನು ಮುಷ್ತಾಕ್ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹಾಸನದಲ್ಲಿರುವ ಬಾನು ಮುಷ್ತಾಕ್ ಅವರ ಮನೆಗೆ ತೆರಳಿ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಬರುವಂತೆ ಅಧಿಕೃತ ಆಹ್ವಾನ ನೀಡಿದರು. ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಆನೆ ವಿಗ್ರಹ ನೀಡಿ ಆಹ್ವಾನ ಪತ್ರಿಕೆಯನ್ನು ನೀಡಿದರು. ದಸರಾ ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿದ ಬಾನು ಮುಷ್ತಾಕ್ ತಾವು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ.

2. ಎಸ್‌ಪಿ ಉಮಾ ಪ್ರಶಾಂತ್ ವಿರುದ್ಧ ಕೀಳುಪದ ಬಳಕೆ: ಶಾಸಕ ಬಿಪಿ ಹರೀಶ್ ವಿರುದ್ಧ FIR

ದಾವಣಗೆರೆಯ ಎಸ್‌ಪಿ ಉಮಾ ಪ್ರಶಾಂತ್ ವಿರುದ್ಧ ಕೀಳುಪದ ಬಳಸಿದ್ದ ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿ.ಪಿ ಹರೀಶ್ ವಿರುದ್ಧ ಸ್ವತಃ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ದಾವಣಗೆರೆಯ ಕೆಟಿಜೆ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ನಾಲಿಗೆ ಹರಿಬಿಟ್ಟಿದ್ದ ಬಿಪಿ ಹರೀಶ್ ಉಮಾ ಪ್ರಶಾಂತ್ ಅವರನ್ನು ನಾಯಿಗೆ ಹೋಲಿಸಿದ್ದರು. ಶಾಮನೂರು ಫ್ಯಾಮಿಲಿಗೆ ಪೊಮೇರಿಯನ್ ನಾಯಿ ತರಾ ವರ್ತನೆ ಮಾಡುತ್ತಾರೆ ಎಂದು ಹೇಳಿದ್ದರು. ಉಮಾ ಪ್ರಶಾಂತ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸುವ ಭರದಲ್ಲಿ ಹರೀಶ್ ಈ ಹೇಳಿಕೆ ನೀಡಿದ್ದರು.

3. ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದರ ಬರ್ಬರ ಹತ್ಯೆ

ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದರ ಮೇಲೆ ಗುಂಡು ಹಾರಿಸಿ, ತಲವಾರ್‌ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ದಾಳಿ ನಡೆದಿತ್ತು. ಕಟಿಂಗ್ ಶಾಪ್‌ಗೆ ತೆರಳುತ್ತಿದ್ದ ವೇಳೆ ನಾಲ್ವರು ಮುಸುಕುಧಾರಿಗಳು ಬಂದು ಕಟಿಂಗ್ ಮಾಡುವವರ ಕಣ್ಣಿಗೆ ಖಾರದ ಪುಡಿ ಎರಚಿ, ಬಳಿಕ ಭೀಮನಗೌಡ ಅವರ ಮೇಲೆ ಗುಂಡು ಹಾರಿಸಿ ತಲವಾರ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಭೀಮನಗೌಡ ಬಿರಾದರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆ ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

4. ಮಾಸ್ಕ್ ಮ್ಯಾನ್ ಚಿನ್ನಯ್ಯ ಮತ್ತೆ 3 ದಿನ SIT ಕಸ್ಟಡಿಗೆ

ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಮತ್ತೆ 3 ದಿನ SIT ಕಸ್ಟಡಿಗೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನ್ಯಾಯಾಲಯ ಆದೇಶ ಹೊರಡಿಸಿದೆ. ಸೆ.6ರಂದು ಚಿನ್ನಯ್ಯನನ್ನು ಮತ್ತೆ ಹಾಜರುಪಡಿಸಲು ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ. ಮತ್ತೊಂದೆಡೆ ಸೌಜನ್ಯ ಪ್ರಕರಣಕ್ಕೂ ಎಸ್ಐಟಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಪ್ರಕರಣದ ಆರೋಪ ಹೊತ್ತಿರುವ ಉದಯ್ ಜೈನ್ ಸೇರಿದಂತೆ ಮಲ್ಲಿಕ್ ಜೈನ್, ಧೀರಜ್ ಕೆಲ್ಲಾಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ಸೂಚಿಸಿದ್ದರು. ಇಂದು ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ್ದ ಉದಯ್ ಜೈನ್, ಸೌಜನ್ಯ ಕೊಲೆ ಪ್ರಕರಣದ ಎಫ್‌ಐಆರ್ ನಲ್ಲಿ ನಮ್ಮ ಹೆಸರು ಇರಲಿಲ್ಲ. ಆದರೂ ನಮ್ಮನ್ನು ಆರೋಪಿಗಳನ್ನಾಗಿಸುವ ಷಡ್ಯಂತ್ರ ನಡೆದಿತ್ತು. ಸಿಬಿಐ ಮತ್ತು ಸಿಐಡಿ ಅಧಿಕಾರಿಗಳು ನಮ್ಮನ್ನು ವಿಚಾರಣೆಗೆ ಒಳಪಡಿಸಿದ್ದರು. ಆ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ ಎಂದು ಸಾಬೀತಾಗಿತ್ತು. ಈಗ ಎಸ್ಐಟಿಯವರು ಯಾವ ಪ್ರಕರಣ ಸಂಬಂಧ ವಿಚಾರಣೆಗೆ ಕರೆದಿದ್ದಾರೆ ಎಂದು ಗೊತ್ತಿಲ್ಲ ಎಂದು ಹೇಳಿದರು.

5. BJP ಶಾಸಕ ಮುನಿರತ್ನಗೆ ಕ್ಲೀನ್ ಚೀಟ್

ಆರ್‌ಎಂಸಿ ಯಾರ್ಡ್ ಮಹಿಳೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನಗೆ ಕ್ಲೀನ್‌ಚಿಟ್ ಸಿಕ್ಕಿದೆ. ಮುನಿರತ್ನ ವಿರುದ್ಧ ದಾಖಲಾಗಿದ್ದ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾಗಿಲ್ಲ ಎಂದು SIT ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದೆ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಮುನಿರತ್ನಗೆ ತಮ್ಮ ಕಾನೂನು ಹೋರಾಟಕ್ಕೆ ಬಲಸಿಕ್ಕಂತಾಗಿದೆ. ನ್ಯಾಯಾಲಯ ಬಿ ರಿಪೋರ್ಟ್‌ ಅಂಗೀಕರಿಸುವುದಷ್ಟೇ ಬಾಕಿ ಇದೆ. ತಮ್ಮ ಮೇಲಿನ ಆರೋಪ ಸುಳ್ಳೆಂದು ಪ್ರಕರಣದ ರದ್ದು ಕೋರಿ ಮುನಿರತ್ನ ಅರ್ಜಿ ಸಲ್ಲಿಸಿದ್ದರು. ಬಿಜೆಪಿ ಕಾರ್ಯಕರ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮುನಿರತ್ನ, ಬೆಂಬಲಿಗರಾದ ವಸಂತ, ಚನ್ನಕೇಶವ, ಕಮಲ್‌ ವಿರುದ್ಧ ಆರ್‌ಎಂಸಿಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com