
ಬೆಂಗಳೂರು: ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಿಲಾದ್-ಉನ್-ನಬಿ ಸಮ್ಮೇಳನ ಆಯೋಜಿಸಿರುವ ಜಂಟಿ ಮಿಲಾದ್ ಸಮಿತಿಗೆ, ವಿದೇಶಿ ಧರ್ಮ ಗುರುಗಳು ಭಾರತದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಅಥವಾ ಧರ್ಮೋಪದೇಶ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯಲಿರುವ ಮಿಲಾದ್-ಉನ್-ನಬಿ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸುವ ಸಾಧ್ಯತೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಭಾರತದ ಗ್ರ್ಯಾಂಡ್ ಮುಫ್ತಿ ಶೇಖ್ ಅಬುಬಕರ್ ಅಹ್ಮದ್ ಮುಸ್ಲಿಯಾರ್ ಅವರೊಂದಿಗೆ ಯೆಮೆನ್‌ನ ಸೂಫಿ ಸಂತ ಹಬೀಬ್ ಉಮರ್ ಬಿನ್ ಹಫೀಜ್ ಅವರನ್ನು ಸಂಘಟಕರು ಆಹ್ವಾನಿಸಿದ್ದಾರೆ.
ಮಿಲಾದ್-ಉನ್-ನಬಿ ಕಾರ್ಯಕ್ರಮದಲ್ಲಿ ವಿದೇಶಿ ಧರ್ಮ ಗುರುಗಳು ಭಾಗವಹಿಸಿ ಭಾಷಣ ಮಾಡುವಂತಿಲ್ಲ. ಇದು ವೀಸಾ ನಿಯಮಗಳ ಉಲ್ಲಂಘನೆಯಾಗುವುದರಿಂದ ಆಯೋಜಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಮತ್ತು ಪೊಲೀಸರು ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಸಚಿವರು ಹೇಳಿದ್ದಾರೆ.
ಭಾರತದ ಕಾನೂನುಗಳಲ್ಲಿ ವಿದೇಶಿಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧರ್ಮೋಪದೇಶ ಮಾಡಲು ಅಥವಾ ಭಾಗವಹಿಸಲು ಯಾವುದೇ ಅವಕಾಶವಿಲ್ಲ ಎಂದು ಕಾರ್ಯಕ್ರಮ ಆಯೋಜಿಸಿದ ಸಂಘಟಕರ ಗಮನಕ್ಕೆ ತಂದಿದ್ದೇವೆ ಎಂದು ಪರಮೇಶ್ವರ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ವಿದೇಶಿ ಧರ್ಮ ಗುರುಗಳನ್ನು ಆಹ್ವಾನಿಸಿರಬಹುದು. ಆದರೆ ನಿಯಮಗಳ ಉಲ್ಲಂಘನೆಯನ್ನು ತಪ್ಪಿಸಲು ಅವರನ್ನು ಆಹ್ವಾನಿಸದಂತೆ ಪೊಲೀಸರು ಸಂಘಟಕರಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ(FRRO) ಈ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
Advertisement