
ಮಂಗಳೂರು: ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ಯೂಟ್ಯೂಬರ್‌ಗಳು ಮತ್ತು ಸ್ಥಳೀಯ ಪತ್ರಿಕೆಗಳ ಸಂಪಾದಕರ ಕೈವಾಡವಿದೆ ಎಂದು ಆರೋಪಿಸಿ ಚಿತ್ರ ನಿರ್ಮಾಪಕ ಪ್ರಶಾಂತ್ ಸಂಬರಗಿ ಅವರು ವಿಶೇಷ ತನಿಖಾ ದಳ (ಎಸ್ಐಟಿ)ಗೆ ಮಂಗಳವಾರ ದೂರು ನೀಡಿದ್ದಾರೆ.
ಅಜಯ್ ಅಂಚನ್, ದಿನೇಶ್ ಕುಮಾರ್, ಹರ್ಷ ಕುಮಾರ್ ಕುಗ್ವೆ, ಮೊಹಮ್ಮದ್ ಸಮೀರ್ ಮತ್ತು ಅಬ್ದುಸ್ಸಲಾಂ ಪುತ್ತಿಗೆ ವಿರುದ್ಧ ಸಂಬರಗಿ ಅವರು ದೂರು ನೀಡಿದ್ದಾರೆ.
ಜುಲೈ 3 ರಂದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ. ಪ್ರೊಟೆಕ್ಟೆಡ್ ವಿಟ್ನೆಸ್ ಸ್ಕೀಮ್ ಅಡಿಯಲ್ಲಿದ್ದ ವ್ಯಕ್ತಿ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ವಾಸವಿದ್ದ.
ಸಾಕ್ಷಿಗಳ ರಕ್ಷಣೆಯ ಅವಧಿಯಲ್ಲಿ, ಯೂಟ್ಯೂಬರ್‌ಗಳಾದ ಅಜಯ್ ಅಂಚನ್ (ಕುಡ್ಲ ರಾಂಪೇಜ್) ಮತ್ತು ದಿನೇಶ್ ಕುಮಾರ್ (ಡಿ ಟಾಕ್ಸ್), ದೂರುದಾರರನ್ನು ಸಂದರ್ಶಿಸಿದ್ದಾರೆ. ಇದರಿಂದಾಗಿ ದೂರುದಾರ ಹಾಗೂ ಸಾಕ್ಷಿದಾರನ ಗುರುತನ್ನು ಬಹಿರಂಗವಾಗಿದೆ. ಈ ಮೂಲಕ ಸಾಕ್ಷಿಗಳ ರಕ್ಷಣೆಯಡಿಯಲ್ಲಿ ಖಾತರಿಪಡಿಸಲಾದ ಗೌಪ್ಯತೆಯನ್ನು ಉಲ್ಲಂಘಿಸಿದ್ದಾರೆ.
ಯೂಟ್ಯೂಬರ್‌ಗಳಿಗೆ ವ್ಯಕ್ತಿಯ ಬಗ್ಗೆ ಮೊದಲೇ ತಿಳಿದಿತ್ತು. ಕಾನೂನುಬಾಹಿರವಾಗಿ ಈತನೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದೆನಿಸುತ್ತಿದೆ. ದೂರುದಾರ ವ್ಯಕ್ತಿ ತಿಮರೋಡಿ ಅವರ ಮನೆಯಲ್ಲಿ ವಾಸವಿದ್ದ ಎಂಬುದು ಈ ಯೂಟ್ಯೂಬರ್‌ಗಳಿಗೆ ಹೇಗೆ ತಿಳಿಯಿತು? ಚಿನ್ನಯ್ಯನ್ನ ಸಂದರ್ಶನವನ್ನು ದೂರು ದಾಖಲಾತಿಗೂ ಮುನ್ನ ಅಥವಾ ದೂರು ದಾಖಲಾದ ನಂತರ ಅಥವಾ ಆರೋಪಿಯಾದ ನಂತರ ಈ ಮೂರು ರೀತಿಯಲ್ಲಿಯೂ ಸಂದರ್ಶನ ತೆಗೆದುಕೊಂಡಿದ್ದಾರೆ. ಅದು ಅಪರಾಧ. ಈ ಯೂಟ್ಯೂಬರ್ ಗಳ ಹಣಕಾಸಿನ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
Advertisement