ಮೈಸೂರು ದಸರಾ 2025: ಸಿಎಂ ಸಿದ್ದರಾಮಯ್ಯಗೆ ಮೈಸೂರು ಜಿಲ್ಲಾಡಳಿತದಿಂದ ಆಹ್ವಾನ
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಆಹ್ವಾನ ನೀಡಲಾಗಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗೆ ಫಲಪುಷ್ಪ ನೀಡಿ ರೇಷ್ಮೆ ಶಾಲು ಹೊದಿಸಿ, ಹಾರ ಹಾಕಿ ಆಹ್ವಾನ ಪತ್ರಿಕೆ ನೀಡಿ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಮಂತ್ರಿಸಿದರು.
ಈ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ವಿಷ್ಣುವರ್ಧನ್, ಜಿಪಂ ಸಿಇಓ ಎಸ್.ಯುಕೇಶ್ ಕುಮಾರ್, ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಹಾಗೂ ಸ್ವಾಗತ ಸಮಿತಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ದಸರಾ ಮಹೋತ್ಸವಕ್ಕೆ ಆಹ್ವಾನ ನೀಡಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಡಹಬ್ಬ ದಸರಾದ ಅಧಿಕೃತ ಆಮಂತ್ರಣ ಪತ್ರಿಕೆ ಇಂದು ನನ್ನ ಕೈಸೇರಿತು. ದಸರೆಯು ಕೇವಲ ಧಾರ್ಮಿಕ ಹಬ್ಬ ಮಾತ್ರವಲ್ಲ, ಈ ನೆಲದ ಪರಂಪರೆ, ಕಲೆ, ಸಂಸ್ಕೃತಿಗಳನ್ನು ಶತಶತಮಾನಗಳಿಂದ ಅನನ್ಯವಾಗಿ ವಿಶ್ವಕ್ಕೆ ಸಾದರಪಡಿಸುತ್ತಿರುವ ಸಾಂಸ್ಕೃತಿಕ ಕಲಾ ಉತ್ಸವ. ದಸರಾ ಹಬ್ಬವು ಒಳಿತಿನ ವಿಜೃಂಭಣೆಯ, ನಾಡಿನ ಕಲಾವಂತಿಕೆ, ಸಾಹಸಗಳನ್ನು ಸಂಭ್ರಮಿಸುವ ಸಡಗರದ ಹಬ್ಬ, ಜನಮನದ ಹಬ್ಬ. ಈ ಹಬ್ಬದಲ್ಲಿ ಪಾಲ್ಗೊಳ್ಳಲು ನಾನು ಅತ್ಯಂತ ಉತ್ಸುಕನಾಗಿದ್ದೇನೆ.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ವೈಮಾನಿಕ ಪ್ರದರ್ಶನ ಕೂಡ ನಡೆಯಲಿದ್ದು, ಇದು ದಸರಾ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಭಾವಿಸಿದ್ದೇನೆ. ಕರೆಯೋಲೆ ನೀಡಿ, ಪ್ರೀತಿಯಿಂದ ಆಹ್ವಾನಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು. ಈ ಬಾರಿಯ ದಸರಾವನ್ನು ನಾವೆಲ್ಲರೂ ಜೊತೆಗೂಡಿ ಯಶಸ್ವಿಯಾಗಿಸೋಣ ಎಂದು ಹೇಳಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ