
ಹುಬ್ಬಳ್ಳಿ: ಫೋಟೋಶೂಟ್ ಗಾಗಿ ಕಾಳಿಂಗ ಸರ್ಪವನ್ನು ಅಕ್ರಮವಾಗಿ ಸೆರೆ ಇಟ್ಟುಕೊಂಡಿದ್ದ ಪ್ರಕರಣದ ತನಿಖೆಯನ್ನು ಕೊಡಗಿನ ಫಾರೆಸ್ಟ್ ಮೊಬೈಲ್ ಸ್ಕ್ವಾಡ್‌ನ ಅಧಿಕಾರಿಗಳು ತೀವ್ರಗೊಳಿಸಿದ್ದು, ಪ್ರಕರಣ ಸಂಬಂಧ ಅಮ್ಮತಿಯ ರೋಶನ್ ಮತ್ತು ಪೊನ್ನಂಪೇಟೆಯ ನವೀನ್ ರಾಕಿ ಅವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ.
ಕೊಡಗಿನಲ್ಲಿ ಕಳೆದ ತಿಂಗಳು ಪ್ರಕರಣ ದಾಖಲಾಗಿತ್ತು. ಕೊಡಗಿನಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಇಬ್ಬರು ಮತ್ತು ಕೊಡಗಿನ ಇಬ್ಬರು ಹಾವು ರಕ್ಷಕರ ಹೆಸರನ್ನು ಉಲ್ಲೇಖಿಸಲಾಗಿತ್ತು.
ಪ್ರಕರಣ ಸಂಬಂಧ ಇದೀಗ ಮಹಾರಾಷ್ಟ್ರದ ವಿಕಾಸ್ ಜಗತಾಪ್. ಕಿರಣ್ ಅಹಿರೆ ಮತ್ತು ಕೊಡಗಿನ ಅಮ್ಮತಿಯ ರೋಶನ್, ಪೊನ್ನಂಪೇಟೆಯ ನವೀನ್ ರಾಕಿ ಅವರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ರೋಶನ್ ಅವರು ಎರಡು ಕಾಳಿಂಗ ಸರ್ಪಗಳನ್ನು ನಿರ್ವಹಿಸುತ್ತಿದ್ದು. ಇದನ್ನು ಅವರ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದ ಪೋಸ್ಟ್ ಗಳಿಂದ ಗಮನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಧಿಕೃತವಾಗಿ ಹಾವುಗಳನ್ನು ಸೆರೆಹಿಡಿಯುವುದು, ಅನಧಿಕೃತವಾಗಿ ಸಂಗ್ರಹಿಸುವುದು, ಪ್ರದರ್ಶನ ವಸ್ತುವಾಗಿ ಬಳಸುವುದು ಮತ್ತು ಎಲ್ಲಿಂದರಲ್ಲಿ ಬಿಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಉಲ್ಲಂಘನೆಯಾಗಿದೆ. ಇದು ಗಂಭೀರ ಅಪರಾಧವಾಗಿದ್ದು, ಈ ಅಪರಾಧಕ್ಕೆ 3 ರಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ಮಾನವ-ಹಾವು ಸಂಘರ್ಷವನ್ನು ನಿರ್ವಹಿಸುವ ಜವಾಬ್ದಾರಿಯುತ ಸಂಸ್ಥೆಗಳು ಮತ್ತು ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಕೊಡಗು ವಿಭಾಗದ ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.
ಕೊಡಗಿನ ವನ್ಯಜೀವಿ ಕಾರ್ಯಕರ್ತರೊಬ್ಬರು ಮಾತನಾಡಿ, ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹಾವು ರಕ್ಷಕರ ದೊಡ್ಡ ಜಾಲವೇ ಇದೆ. ಅವರು ಅಪರೂಪದ ಹಾವುಗಳ ತಮ್ಮ ವಶದಲ್ಲಿರಿಸಿಕೊಂಡು ಫೋಟೋಶೂಟ್ ಮೂಲಕ ಹಣ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಇಂತಹ ಜಾಲ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಬ್ರಹ್ಮಗಿರಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಯಾವುದೇ ಅನುಮತಿ ಇಲ್ಲದೆ ಅಕ್ರಮ ಶಿಬಿರಗಳು, ಹಾಗೂ ಫೋಟೋಶೂಟ್ ಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಬೇಕಿದೆ. ಹಲವು ಪ್ರಕರಣಗಳಲ್ಲಿ ತನಿಖೆ ಆದೇಶಿಸಿದ್ದರು, ಉತ್ತರಗಳು ಸಿಕ್ಕಿಲ್ಲ. ಹೀಗಾಗಿ ತನಿಖಾ ತಂಡದ ಮೇಲೆ ಒತ್ತಡ ಹೇರಲು ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ಆಗುಂಬೆಯಲ್ಲಿರುವ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಶಿವಮೊಗ್ಗ ಅರಣ್ಯ ವಿಭಾಗಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ನಿರ್ದೇಶನ ನೀಡಿದ್ದಾರೆ.
Advertisement