
ಬೆಂಗಳೂರು: ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಮಿಷನ್ ವಸೂಲಿ ಆರೋಪಕ್ಕೆ ಗುರಿಯಾಗಿರುವ ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದು ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ.
ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮವು ಭೂಒಡೆತನ ಯೋಜನೆ ಜಾರಿಗೊಳಿಸಲಾಗಿದ್ದು ಈ ಯೋಜನೆಯಡಿ 60 ಎಕರೆ ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿತ್ತು. ಈ ಫಲಾನುಭವಿಗಳಿಂದ ಶೇಕಡ 60ರಷ್ಟು ಕಮಿಷನ್ ನಿಗದಿ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಕುರಿತ ವಿಡಿಯೋವೊಂದು ವೈರಲ್ ಆಗಿತ್ತು.
ಈ ಹಿಂದೆ ಮಾತನಾಡಿದ್ದ ರವಿಕುಮಾರ್, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ. ಆದರೂ ಪಕ್ಷಕ್ಕೆ ಮುಜುಗರ ಉಂಟಾಗುವುದನ್ನು ತಡೆಯಲು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೂಡಲು ನಿರ್ಧರಿಸಿದ್ದೆ ಎಂದು ಹೇಳಿದ್ದರು. ನಿಗಮದ ಅಧ್ಯಕ್ಷನಾದ ನಂತರ ನಾನು ಯಾರ ಬಳಿಯೂ ಕಮೀಷನ್ ಪಡೆದಿಲ್ಲ. ಯಾರಿಗೂ ಕೊಟ್ಟಿಲ್ಲ. ಎಐ ತಂತ್ರಜ್ಞಾನ ಬಳಸಿಕೊಂಡು ನನ್ನ ಮಾತುಗಳನ್ನು ತಿರುಚಲಾಗಿದೆ. ನಿಗಮದ ಕಚೇರಿಯಲ್ಲಿಯೇ ವಿಡಿಯೊ ಚಿತ್ರೀಕರಿಸಿರುವುದು ಅಚ್ಚರಿ ಮೂಡಿಸಿದೆ. ಈ ಪಿತೂರಿಯಲ್ಲಿ ನಿಗಮದ ಅಧಿಕಾರಿಗಳ ಪಾತ್ರವನ್ನು ಅಲ್ಲಗಳೆಯಲಾಗದು. ಮುಖ್ಯಮಂತ್ರಿ ಮತ್ತು ಡಿಸಿಎಂ ಅವರನ್ನು ಭೇಟಿಯಾಗಿ ವಾಸ್ತವ ಏನೆಂಬುದನ್ನು ಮನವರಿಕೆ ಮಾಡಿಕೊಟ್ಟು ತನಿಖೆ ನಡೆಸುವಂತೆ ಮನವಿ ಮಾಡಲಿದ್ದೇನೆ ಎಂದು ತಿಳಿಸಿದರು.
ಈ ಹಿಂದೆ ಭೋವಿ ಅಭಿವೃದ್ಧಿ ನಿಗಮದಲ್ಲಿ ಬಹು ದೊಡ್ಡ ಹಗರಣವೇ ನಡೆದಿತ್ತು. ಅಧ್ಯಕ್ಷ ಸ್ಥಾನ ಮುಳ್ಳಿನ ಕುರ್ಚಿ ಎಂಬ ಅರಿವು ನನಗಿತ್ತು. ಭ್ರಷ್ಟಾಚಾರ ತಡೆಯಲು ಬಿಗಿ ಕ್ರಮಗಳನ್ನು ಅನುಸರಿಸಿದ್ದೆ. ಈ ಬೆಳವಣಿಗೆಗಳನ್ನು ಸಹಿಸಿಕೊಳ್ಳಲಾಗದ ಕೆಲವರು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದರು.
Advertisement